ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ಬೇರೆ ರಾಜ್ಯ ಸರ್ಕಾರಗಳಂತೆ ನಾವು ಕೂಡ ಆದಾಯದ ಮೂಲಗಳ ಬಗ್ಗೆ ಖಾಸಗಿ ಕಂಪನಿಗಳ ಸಲಹೆ ಕೇಳಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಕೆಪಿಸಿಸಿ ಕಚೇರಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆದಾಯ ಮೂಲಗಳ ಕುರಿತ ಸಲಹೆಗೆ ವಿದೇಶಿ ಕಂಪನಿಗಳನ್ನು ನೇಮಿಸಿರುವ ಬಗ್ಗೆ ಬಿಜೆಪಿ ಟೀಕೆ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಸಂಪನ್ಮೂಲ ಕ್ರೋಢೀಕರಣಗಳತ್ತ ಹೆಚ್ಚು ಗಮನಹರಿಸುತ್ತಿದ್ದು, ಬೇರೆಯವರಂತೆ ನಾವು ಕೂಡ ಅನೇಕರ ಸಲಹೆ ಕೇಳಿದ್ದೇವೆ. ನಾವು ಬಿಜೆಪಿಯವರಂತೆ ಹಣಕಾಸಿಗಾಗಿ ಸರ್ಕಾರಿ ಆಸ್ತಿಗಳನ್ನು ಅಡಮಾನ ಇಡುತ್ತಿಲ್ಲ. ಸರ್ಕಾರದ ಹಾಗೂ ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.
ಮಾಜಿ ಮೇಯರ್ಗಳ ಸಮಿತಿ ರಚನೆ: ಕಾಂಗ್ರೆಸ್ ಕಚೇರಿಯ ಇಂದಿರಾ ಗಾಂಧಿ ಭವನದಲ್ಲಿ ಪಕ್ಷದ ಬೆಂಗಳೂರು ಮಾಜಿ ಮೇಯರ್ ಹಾಗೂ ಉಪಮೇಯರ್ಗಳ ಜತೆ ಸಭೆ ನಡೆಸಲಾಯಿತು. ಬಳಿಕ ಮಾತನಾಡಿದ ಡಿಸಿಎಂ ಡಿಕೆಶಿ, ಮಾಜಿ ಮೇಯರ್ ಹಾಗೂ ಉಪಮೇಯರ್ಗಳ ಜತೆ ಸಭೆ ಮಾಡಿ ಬೆಂಗಳೂರಿನ ಆಚಾರ - ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ನಮ್ಮ ನಾಯಕರ ಅಭಿಪ್ರಾಯ ಕೇಳಿದ್ದೇವೆ. ಚುನಾವಣೆ ತಯಾರಿ ಬಗ್ಗೆ ಅನೇಕ ಸಲಹೆ ನೀಡಿದ್ದಾರೆ ಎಂದರು.
ಮಾಜಿ ಮೇಯರ್ಗಳ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಎ ಖಾತೆ, ಬಿ ಖಾತೆ ಸೇರಿದಂತೆ ಅನೇಕ ಸಾರ್ವಜನಿಕ ಸಮಸ್ಯೆಗಳು ಹಾಗೂ ಆಡಳಿತಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಈ ಸಮಿತಿ ಅಧ್ಯಯನ ಮಾಡಿ ವರದಿ ನೀಡಲಿದೆ. ಮುಂದಿನ ಎಂಟತ್ತು ದಿನಗಳಲ್ಲಿ ಮತ್ತೊಮ್ಮೆ ಸಭೆ ಮಾಡುತ್ತೇವೆ. ಸಮಿತಿ ವರದಿ ಮೇಲೆ ಮುಖ್ಯಮಂತ್ರಿಗಳು ಹಾಗೂ ಶಾಸಕರ ಜತೆ ಚರ್ಚೆ ಮಾಡುತ್ತೇವೆ. ನಂತರ ನಮ್ಮ ಕಾರ್ಯಯೋಜನೆ ರೂಪಿಸುತ್ತೇವೆ ಎಂದು ಡಿಕೆಶಿ ತಿಳಿಸಿದರು.