ಬೆಂಗಳೂರು: ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕೊಟ್ಟಿದ್ದಾರೆ. 18 ಸಾವಿರ ಕೋಟಿ ರೂ. ಬರ ಪರಿಹಾರ ಕೇಳಿದ್ದೆವು, ಮೂರು ಸಾವಿರರ ಚಿಲ್ಲರೆ ಕೋಟಿ ರೂ. ಕೊಟ್ಟಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಬರ ಪರಿಹಾರ ರಿಲೀಸ್ ವಿಚಾರವಾಗಿ ಪ್ರತಿಕ್ರಿಯಿಸಿ, ಕನಿಷ್ಠ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಕೊಡಬೇಕಾದ ಪಾಲು ಸರಿಯಾಗಿ ಕೊಟ್ಟಿಲ್ಲ. ಹೋರಾಟವನ್ನು ನಾವು ಮುಂದುವರೆಸುತ್ತೇವೆ. ಬರಗಾಲದಲ್ಲಿ ರಾಜಕೀಯ ಮಾಡೋದು ಬೇಡ, ರಾಜ್ಯಕ್ಕಾಗಿರುವ ಅನ್ಯಾಯವನ್ನು ಸರಿಪಡಿಸಿ. ಬಿಜೆಪಿ ನಾಯಕರಿಗೆ ನಾನು ಮನವಿ ಮಾಡುತ್ತೇನೆ. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನ್ಯಾಯ ನಮಗೆ ಸಿಗಬೇಕು. ಬಿಜೆಪಿ ನಾಯಕರಿಗೆ ರಾಜ್ಯದ ಬಗ್ಗೆ ಅಭಿಮಾನ ಇದ್ದರೆ ಒಕ್ಕೋರಲಿನಿಂದ ನೀವು ಮನವಿ ಮಾಡಿ ಎಂದು ಒತ್ತಾಯಿಸಿದರು.
ಮೊದಲ ಹಂತದ ಚುನಾವಣೆ ಬಳಿಕ ಬರ ಪರಿಹಾರ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ ಜನ ವಿರುದ್ಧವಾಗಿದ್ದಾರೆ ಅಂತ ಗೊತ್ತಾಗಿದೆ. ಅದಕ್ಕೆ ಬಿಡುಗಡೆ ಮಾಡಿದ್ದಾರೆ. ಮುಂದಾದ್ರೂ ಸರಿ ಮಾಡಿಕೊಳ್ಳಿ. ಈಗ ಕೊಟ್ಟಿರುವ ಹಣ ಸಾಕಾಗಲ್ಲ. 15 ಸಾವಿರ ಕೋಟಿಯಾದ್ರೂ ಕೊಡಬೇಕು ಎಂದ ಅವರು, ಮೊದಲ ಹಂತದ ಮತದಾನ ವಿಚಾರವಾಗಿ ಪ್ರತಿಕ್ರಿಯಿಸಿ, ಮಂಡ್ಯ, ಮೈಸೂರು, ಹಾಸನ, ಕೋಲಾರ, ಬೆಂಗಳೂರು ಸೇರಿ ಅನೇಕ ಕಡೆ ಯಶಸ್ವಿಯಾಗಿದೆ. ಖಂಡಿತ ನಮಗೆ ಡಬ್ಬಲ್ ಡಿಜಿಟ್ ಬರುತ್ತದೆ. ನಮಗೆ ವಿಶ್ವಾಸ ಇದೆ. ಇಲ್ಲ ಅಂದ್ರೆ ಇವರು ಹಣ ಬಿಡುಗಡೆ ಮಾಡ್ತಾ ಇದ್ರಾ?. ಅವರಿಗೆ ರಿಪೋರ್ಟ್ ಬಂದಿದೆ ಅದಕ್ಕೆ ಬಿಡುಗಡೆ ಮಾಡಿದ್ದಾರೆ ಎಂದರು.
ನಾನು ಗೆಲ್ಲುವ ಆತ್ಮವಿಶ್ವಾಸ ಇದೆ: ಇದೇ ವೇಳೆ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಯಾವುದೇ ಸಮಸ್ಯೆ ಆಗದೇ ಚುನಾವಣೆ ಆಗಿದೆ. ಅವರ ಕಾರ್ಯಕರ್ತರೇ ಕೆಲವೆಡೆ ಗಲಾಟೆ ಮಾಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಕ್ಷೇತ್ರದಲ್ಲಿ 5% ವೋಟಿಂಗ್ ಹೆಚ್ಚಾಗಿದೆ. ಕಾರ್ಯಕರ್ತರು ಹುಮ್ಮಸ್ಸಿನಿಂದ ಇದ್ದಾರೆ. ಒಳ್ಳೆ ಫಲಿತಾಂಶದ ನಿರೀಕ್ಷೆಯಲ್ಲಿ ಇದ್ದೇನೆ. ನಾನು ಗೆಲ್ಲುವ ಆತ್ಮವಿಶ್ವಾಸ ಇದೆ ಎಂದರು.
ಬರ ಪರಿಹಾರ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಪದೇ ಪದೆ ರೈತರಿಗೆ ಮಲತಾಯಿ ಧೋರಣೆ ಆಗ್ತಿತ್ತು. ಧ್ವನಿ ಎತ್ತಿದ್ರೆ ಚುನಾವಣಾ ಆಯೋಗದ ಮೇಲೆ ಹಾಕ್ತಿದ್ರು. ಈಗ 20% ಹಣ ಬಿಡುಗಡೆ ಮಾಡಿದ್ದಾರೆ. ಸುಮಾರು 18,000ಕೋಟಿ ಹಣ ಬಿಡುಗಡೆ ಆಗಬೇಕಿತ್ತು. 223 ತಾಲೂಕನ್ನು ಬರ ಪೀಡಿತವೆಂದು ಘೋಷಿಸಲಾಗಿದೆ. ಈಗ ಕೇವಲ ಭಿಕ್ಷೆ ರೀತಿ ಹಣ ನೀಡಿದ್ದಾರೆ. ರೈತರ ವಿಚಾರದಲ್ಲಿ ಹೀಗೆ ಮಾಡುವುದು ಎಷ್ಟು ಸರಿ?. ಈಗ ಕೇವಲ 3 ಸಾವಿರ ಕೋಟಿ ಕೊಟ್ಟಿದ್ದಾರೆ. ಮುಂದೆ ಬಾಕಿ ಕೇಳಿದ್ರೆ ಮಳೆ ಬಂತು ಅಂತ ಕ್ಯಾತೆ ತೆಗೆಯುತ್ತಾರೆ ಎಂದು ಹೇಳಿದರು.