ದಾವಣಗೆರೆ: ಬೆಣ್ಣೆ ನಗರಿ ಖ್ಯಾತಿಯ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ರಂಗೇರುತ್ತಿದೆ. ಆದರೆ ಮೂಲ ಸೌಕರ್ಯ ವಂಚಿತ ಮಹಾಲಕ್ಷ್ಮಿ ಲೇಔಟ್ ನಿವಾಸಿಗಳು ಈ ಬಾರಿ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಮಹಾಲಕ್ಷ್ಮೀ ಕಾಲೊನಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಎಷ್ಟೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅದ್ದರಿಂದ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಸ್ಥಳೀಯ ನಿವಾಸಿಗಳು ಜಿಲ್ಲಾ ಚುನಾವಣಾಧಿಕಾರಿಗೆ ಸಂದೇಶ ರವಾನಿಸಿದ್ದಾರೆ.
ನಗರದ ಮಹಾಲಕ್ಷ್ಮಿ ಲೇಔಟ್ 400ಕ್ಕೂ ಹೆಚ್ಚು ಮನೆಗಳಿದ್ದು, ಹಲವು ವರ್ಷಗಳಿಂದಲೂ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ, ಉದ್ಯಾನವನ ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿ ಮಹಾಲಕ್ಷ್ಮಿ ಲೇಔಟ್ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ಇಂದು ಸಭೆ ಮಾಡಿ ಮತದಾನ ಬಹಿಷ್ಕರಿಸಲು ನಿರ್ಧಾರ ಕೈಗೊಂಡರು.
ಮಹಾಲಕ್ಷ್ಮೀ ಕಾಲೊನಿ ಪಾಲಿಕೆ ವ್ಯಾಪ್ತಿಗೆ ಒಳಪಟ್ಟು 10 ವರ್ಷ ಕಳೆದರೂ, ಇನ್ನೂ ಕೂಡ ಬೀದಿ ದೀಪಗಳು ಮರೀಚಿಕೆಯಾಗಿವೆ. ಬೀದಿ ದೀಪ ಇಲ್ಲದ್ದರಿಂದ ರಾತ್ರಿ ಹೊತ್ತು ಕುಡುಕರ ಹಾವಳಿ ಹೆಚ್ಚಾಗಿದ್ದು, ಮಹಿಳೆಯರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಇನ್ನೂ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ಅನೇಕ ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಮತದಾನ ಬಹಿಷ್ಕಾರ: ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪ್ರಕಾಶ್ ಕುಮಾರ್ ಮಾತನಾಡಿ, ಮಹಾಲಕ್ಷ್ಮಿ ಕಾಲೊನಿ ಆಗಿ ಹತ್ತು ವರ್ಷಗಳು ಗತಿಸಿವೆ. ಇಲ್ಲಿ 400 ಮನೆಗಳಿದ್ದು, ಇಲ್ಲಿಯ ತನಕ ಯಾವುದೇ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಇದರಿಂದಾಗಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ. ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದ್ರೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದರು.
ಮಹಿಳೆಯರಿಗೆ ಬೇಕಿದೆ ರಕ್ಷಣೆ: ಮಹಿಳೆಯರು ಮನೆಯಿಂದ ಹೊರಹೋಗದಂತಹ ಭಯದ ವಾತಾವರಣ ನಿರ್ಮಾಣ ಆಗಿದೆ. ರಾತ್ರಿ ಹೊತ್ತು ಕುಡುಕರ ಹಾವಳಿ ಹೆಚ್ಚಾಗಿದೆ. ಇದರಿಂದ ಮಕ್ಕಳನ್ನು ಕರೆತರಲು ಹೋಗಲು ಆಗ್ತಿಲ್ಲ, ವಿದ್ಯುತ್, ನೀರು, ರಸ್ತೆ ಸೇರಿದಂತೆ ಹಲವಾರು ಮೂಲ ಸೌಕರ್ಯ ಸಮಸ್ಯೆಗಳಿದ್ದು ಬಗೆಹರಿಸ್ಬೇಕಾಗಿದೆ. ಮತದಾನ ಬಹಿಷ್ಕಾರ ಮಾಡಿದ್ರೆ ಅಧಿಕಾರಿಗಳು ನಮ್ಮ ಸಮಸ್ಯೆ ಬಗೆಹರಿಸುತ್ತಾರೆಂಬ ಆಶಾಭಾವನೆ ಇದೆ. ಅದಕ್ಕೆ ಈ ನಿರ್ಧಾರ ಕೈಗೊಂಡಿದ್ದೇವೆ. ರಾತ್ರಿ ವೇಳೆ ಬೀದಿ ದೀಪಗಳು ಇಲ್ಲದ್ದರಿಂದ ಕಗ್ಗತ್ತಲು ಇರುತ್ತದೆ. ಈ ವೇಳೆ ಮನೆಯಿಂದ ಹೊರಹೋಗಲು ಭಯ ಆಗುತ್ತದೆ ಎಂದು ಸ್ಥಳೀಯ ನಿವಾಸಿ ಶ್ವೇತಾ ಎಂಬುವರು ತಿಳಿಸಿದರು.