ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ(ದುಡಾ) ಲೇಔಟ್ ಮಾಡಲು ಜಮೀನಿಗಾಗಿ ಎಷ್ಟೇ ಹುಡುಕಾಟ ನಡೆಸಿದರೂ ಸೂಕ್ತ ಬೆಲೆಯಲ್ಲಿ ಜಮೀನು ಸಿಗುತ್ತಿಲ್ಲ. ಹೀಗಾಗಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿರ್ಮಿಸಿವ ಅಪಾರ್ಟ್ಮೆಂಟ್ಗಳಂತೆಯೇ ದಾವಣಗೆರೆಯಲ್ಲಿ ದುಡಾ ವತಿಯಿಂದ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನಿರ್ಧಾರ ಕೈಗೊಂಡಿದ್ದಾರೆ.
ಇದರಿಂದ ಕಡಿಮೆ ದರದಲ್ಲಿ ಸೂರು ಸಿಗುವಂತಾಗಬೇಕು ಎಂಬ ಮಧ್ಯಮ ವರ್ಗದವರ ಆಸೆ ಈಡೇರುವ ಕಾಲ ಹತ್ತರ ಬಂದಂತಾಗಿದೆ. ಈ ಕುರಿತು ಇತ್ತೀಚೆಗೆ ದೂಡಾ ಕಚೇರಿಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ದುಡಾ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, "ಅಪಾರ್ಟ್ಮೆಂಟ್ ನಿರ್ಮಾಣ ಮಾಡಲು ದುಡಾ ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ. ಅಪಾರ್ಟ್ಮೆಂಟ್ಗಳು ದಾವಣಗೆರೆ ನಗರದ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ನಿರ್ಮಿಸಲು ಆದೇಶಿಸಲಾಗಿದೆ. ಅಪಾರ್ಟ್ಮೆಂಟ್ ನಿರ್ಮಾಣ ಮಾಡಿ ಕೈಗೆಟುಕುವ ದರದಲ್ಲಿ ದೂಡದಿಂದಲೇ ಮಾಧ್ಯಮ ವರ್ಗದ ಜನರಿಗೆ ಮಾರಾಟ ಮಾಡಬೇಕು" ಎಂದು ತಿಳಿಸಿದರು.
ಹೊಸ ಬಡಾವಣೆ ನಿರ್ಮಿಸಲು ಚಿಂತನೆ: ಸರ್ಕಾರಿ ಅಪಾರ್ಟ್ಮೆಂಟ್ ಅಲ್ಲದೆ ದಾವಣಗೆರೆ ನಗರದಲ್ಲಿ ದೂಡದಿಂದ ನೂತನ ಬಡಾವಣೆಗಳನ್ನು ನಿರ್ಮಾಣ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ. ಇದರಿಂದ ಬಡವರಿಗೆ ಕೈಗೆಟುಕುವ ದರದಲ್ಲಿ ನಿವೇಶನಗಳು ಸಿಗಲಿವೆ. ಹರಿಹರ ಭಾಗದಲ್ಲೂ ಹೆಚ್ಚು ಅಭಿವೃದ್ಧಿ ಆಗಬೇಕು ಎಂದು ಅಧಿಕಾರಿಗಳಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ದಾವಣಗೆರೆ - ತುಮಕೂರು ನೇರ ಮಾರ್ಗ: ರೈಲು ನೋಡದವರಿಗೂ ಟ್ರೈನ್ ಭಾಗ್ಯ, ಮೂರು ಜಿಲ್ಲೆಗಳ ಈ ಊರುಗಳಿಗೆ ಹೊಸ ನಿಲ್ದಾಣಗಳಿವು