ದಾವಣಗೆರೆ: ಚಿನ್ನಾಭರಣ ಬಿಡಿಸುವ ನೆಪದಲ್ಲಿ ಬ್ಯಾಂಕ್ ಮ್ಯಾನೇಜರ್ಗೆ ಮೋಸ ಮಾಡಿ ಬಂಗಾರ ಪಡೆದು ಕಾಲ್ಕಿತ್ತಿದ್ದ ಇಬ್ಬರು ಖದೀಮರನ್ನು ಪೊಲೀಸರು ಬಂಧಿಸಿ, 09 ಲಕ್ಷ ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಫೆಡರಲ್ ಬ್ಯಾಂಕಿನ ವ್ಯವಸ್ಥಾಪಕರಾದ ಮಲ್ಲಯ್ಯ ಹೆಬ್ಬಳ್ಳಿಮಠ ಎಂಬುವರ ಬಳಿ ಅಜಯ್ ಕಂಚಿಕೇರಿ ಎಂಬುವರು ಆಗಮಿಸಿ ನಾವು ಇಂಡಲ್ ಮನಿ ಎನ್ಬಿಎಫ್ಸಿಯಲ್ಲಿ ಬಂಗಾರದ ಅಡಮಾನ ಸಾಲ ಪಡೆದಿದ್ದೇವೆ. ಅಲ್ಲಿ ಬಡ್ಡಿ ಜಾಸ್ತಿ ಇದೆ, ಆ ಸಾಲದ ಖಾತೆಯನ್ನು ನಿಮ್ಮ ಬ್ಯಾಂಕಿಗೆ ಟೇಕ್ ಓವರ್ ಮಾಡಿಕೊಳ್ಳಿ ಎಂದು ಹೇಳಿ ನಂಬಿಸಿದ್ದಾರೆ. ಆದ್ದರಿಂದ ಫೆಡರಲ್ ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದು, ಅ ಖಾತೆಗೆ ಫೆಡರಲ್ ಬ್ಯಾಂಕಿನಿಂದ 7 ಲಕ್ಷ 20 ಸಾವಿರ ರೂ ಜಮೆ ಮಾಡಿಸಿಕೊಂಡು ಸದರಿ ಹಣವನ್ನು ಇಂಡಲ್ ಮನಿ ಎನ್ಬಿಎಫ್ಸಿಯ ಸಾಲದ ಖಾತೆಗೆ ಜಮಾ ಮಾಡಿಸಿದ್ದರು.
ಬಳಿಕ ಮಲ್ಲಯ್ಯ ಹೆಬ್ಬಳ್ಳಿಮಠ ಹಾಗೂ ಅವರ ಸಿಬ್ಬಂದಿಯು ಅಜಯ್ ಕಂಚಿಕೇರಿ ಅವರೊಂದಿಗೆ ಇಂಡಲ್ ಮನಿ ಎನ್ಬಿಎಫ್ಸಿಯಲ್ಲಿ ಬಂಗಾರವನ್ನು ತಮ್ಮ ವಶಕ್ಕೆ ಪಡೆಯಲು ತೆರಳಿದಾಗ, ಅಜಯ್ ಕಂಚಿಕೇರಿ ಅವರು ಅಡಮಾನ ಮಾಡಿದ್ದ ಒಡವೆಗಳನ್ನು ಪಡೆದುಕೊಂಡಿದ್ದರು. ಅ ವೇಳೆ, ಅಜಯ್ ಎಂಬ ಇನ್ನೊಬ್ಬ ವ್ಯಕ್ತಿಯು ಆ ಒಡವೆಗಳನ್ನು ನೋಡುವುದಾಗಿ ಹೇಳಿ ಅಜಯ್ ಕಂಚಿಕೇರಿ ಅವರಿಂದ ಪಡೆದುಕೊಂಡು ಒಡವೆಗಳನ್ನು ಮ್ಯಾನೇಜರ್ ಇವರಿಗೆ ವಾಪಸ್ ಕೊಡದೇ ಮೋಸ ಮಾಡಿ ಅಲ್ಲಿಂದ ಓಡಿ ಹೋಗಿದ್ದರು. ಈ ಬಗ್ಗೆ ಮ್ಯಾನೇಜರ್ ಅವರು ಅಜಯ್ ಕಂಚಿಕೇರಿ ಹಾಗೂ ಅಜಯ್ ಕುಮಾರ ಎಂಬುವವರ ಮೇಲೆ ನೀಡಿದ ದೂರಿನ ಮೇರೆಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿಗಳು ಮತ್ತು ಬಂಗಾರದ ಆಭರಣಗಳನ್ನು ಪತ್ತೆ ಮಾಡಲು ಪೊಲೀಸ್ ತಂಡ ರಚಿಸಲಾಗಿತ್ತು. ಅಜಯ್ ಕಂಚಿಕೆರೆ ಹಾಗೂ ಅಜಯ್ ಕುಮಾರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 9 ಲಕ್ಷ ರೂ ಬೆಲೆಯ 161 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.