ಬೆಂಗಳೂರು: ಕುಟುಂಬದ ವ್ಯಾಖ್ಯಾನದಲ್ಲಿ ನಿರ್ದಿಷ್ಟ ಸಂಬಂಧಿಗಳನ್ನು ಮಾತ್ರ ಸೇರಿಸಲಾಗಿದೆ. ಆದರೆ, ಸೊಸೆಯನ್ನು ಉಲ್ಲೇಖಿಸಿಲ್ಲ. ಹಾಗಾಗಿ, ಸೊಸೆಗೆ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡಿ ಎಂದು ನಿರ್ದೇಶಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅನುಕಂಪದ ಆಧಾರದ ಮೇಲೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಲ್ಲಿ ಹುದ್ದೆ ಕೋರಿ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಪ್ರಿಯಾಂಕಾ ಹುಲಮನಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ ಅವರಿದ್ದ ಧಾರವಾಡ ವಿಭಾಗೀಯಪೀಠ ಈ ಆದೇಶ ನೀಡಿದೆ.
ಕಾನೂನು ನಿರೂಪಕರು ಶಾಸನವನ್ನು ರೂಪಿಸುವಾಗ 'ಕುಟುಂಬ'ದ ವ್ಯಾಖ್ಯಾನದಲ್ಲಿ ಉದ್ಯೋಗಿಯ ನಿರ್ದಿಷ್ಟ ಸಂಬಂಧಿಗಳನ್ನು ಅದರ ವ್ಯಾಪ್ತಿಗೆ ಸೇರ್ಪಡೆ ಮಾಡಿದ್ದಾರೆ. ಆದರೆ, ಅವರಲ್ಲಿ ಸೊಸೆಯ ಉಲ್ಲೇಖವಿಲ್ಲ. ಆ ಶಾಸನದ ಅರ್ಥವನ್ನು ವಿಸ್ತರಣೆ ಮಾಡುವುದು ನ್ಯಾಯಾಂಗದ ಕಾರ್ಯವಲ್ಲ. ಸೊಸೆಗೆ ಅನುಕುಂಪದ ಹುದ್ದೆ ನೀಡುವ ಸಲುವಾಗಿ ಕುಟುಂಬದ ವ್ಯಾಖ್ಯಾನವನ್ನು ವಿಸ್ತರಿಸಿ ಎಂದು ನ್ಯಾಯಾಲಯವನ್ನು ಕೇಳುವುದು ಒಪ್ಪಲಾಗುವುದಿಲ್ಲ ಎಂದು ಪೀಠ ಹೇಳಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ಉದ್ಯೋಗ) ನಿಯಮ 2021ರ ನಿಯಮ 2(ಬಿ)(ಐಐ) ಅನ್ವಯ ಕುಟುಂಬದ ವ್ಯಾಖ್ಯಾನದಲ್ಲಿ ಸೊಸೆಯನ್ನು ಸೇರಿಸಬೇಕು ಮತ್ತು ಅರ್ಜಿದಾರಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವಂತೆ ಆದೇಶಿಸಬೇಕು'' ಎಂದು ಕೋರಿದ್ದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರದ ವಕೀಲರು, ''ಅರ್ಜಿದಾರರು ಪ್ರಶ್ನಿಸಿರುವ ಶಾಸನವನ್ನು ಶಾಸಕಾಂಗ ತನ್ನ ವಿವೇಚನೆ ಬಳಸಿ ಮಾಡಿದೆ. ಶಾಸನ ನಿರೂಪಕರು ಅತಿ ಎಚ್ಚರಿಕೆಯಿಂದಲೇ ಕುಟುಂಬದ ವ್ಯಾಖ್ಯಾನ ಮಾಡಿದ್ದಾರೆ. ಹಾಗಾಗಿ, ಕೋರ್ಟ್ ಸೊಸೆಯನ್ನು ಕುಟುಂಬದ ವ್ಯಾಪ್ತಿಗೆ ಸೇರಿಸುವಂತಿಲ್ಲ. ಹಾಗೊಂದು ವೇಳೆ ಮಾಡಿದರೆ ಅದು ಶಾಸಕಾಂಗದ ಕಾರ್ಯವನ್ನು ನ್ಯಾಯಾಂಗ ಮಾಡಿದಂತಾಗುತ್ತದೆ'' ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಪ್ರಕರಣವೇನು?: ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಗೌರಮ್ಮ ಆರ್.ಹಲಮಣಿ ಅವರು ರಿಜಿಸ್ಟ್ರಾರ್ ಆಗಿ ಉದ್ಯೋಗ ಮಾಡುತ್ತಿದ್ದರು. ಕೊರೊನಾ ಸೋಂಕಿಗೆ ತುತ್ತಾಗಿ 2021ರ ಮೇ 2ರಂದು ಅವರು ಮೃತ್ತಪಟ್ಟಿದ್ದರು. ಮೃತರಿಗೆ ವಿಜಯಕುಮಾರ್, ಪ್ರವೀಣ್ ಮತ್ತು ಶಿಲ್ಪಾ ರಾಣಿ ಎಂಬ ಮಕ್ಕಳಿದ್ದರು. ಪ್ರವೀಣ್ ಅವರನ್ನು ಪ್ರಿಯಾಂಕಾ ಮದುವೆಯಾಗಿದ್ದರು. ಆದರೆ, ಪ್ರವೀಣ್ ಸಹ 2021ರ ಮೇ 2ರಂದೇ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಇದರಿಂದ ಮೃತರ ಕಾನೂನುಬದ್ಧ ವಾರಸುದಾರರು ಸಿವಿಲ್ ಕೋರ್ಟ್‌ಗೆ 2022ರಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಸಂಬಂಧ ಮೃತರ ಕಾನೂನುಬದ್ಧ ವಾರಸುದಾರರ ಮಧ್ಯೆ ಒಪ್ಪಂದ ಏರ್ಪಟ್ಟಿತ್ತು. ಗೌರಮ್ಮ ಅವರ ಸಾವಿನ ಹಿನ್ನೆಲೆಯಲ್ಲಿ ಅನುಕಂಪದ ಉದ್ಯೋಗ ಹಕ್ಕನ್ನು ಪ್ರಿಯಾಂಕಾ ಕ್ಲೇಮು ಮಾಡಬೇಕು ಎಂಬುದು ಆ ಒಪ್ಪಂದವಾಗಿತ್ತು.
ಅದರಂತೆ, ಪ್ರಿಯಾಂಕಾ ಅವರು ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಿ ಸರ್ಕಾರಕ್ಕೆ 2021ರ ಜೂನ್ 22ರಂದು ಅರ್ಜಿ ಸಲ್ಲಿಸಿದ್ದರು. ಆ ಮನವಿಯನ್ನು 2023ರ ಆಗಸ್ಟ್ 10ರಂದು ತಿರಸ್ಕರಿಸಿದ್ದ ಸರ್ಕಾರ, ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದ ಮೇಲೆ ನೇಮಕಾತಿ) ಅಧಿನಿಯಮ-2021ರಲ್ಲಿ ಅನುಕಂಪದ ಆಧಾರದ ಮೇಲೆ ಸೊಸೆಗೆ ಉದ್ಯೋಗ ಕಲ್ಪಿಸಲು ಅವಕಾಶವಿಲ್ಲ ಎಂದು ಹೇಳಿತ್ತು. ಈ ಆದೇಶ ರದ್ದು ಕೋರಿ ಪ್ರಿಯಾಂಕಾ ಸಲ್ಲಿಸಿದ್ದ ಅರ್ಜಿಯನ್ನು ಕೆಎಟಿ ವಜಾಗೊಳಿಸಿತ್ತು. ಇದರಿಂದ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಮುತಾಲಿಕ್ ವಿರುದ್ದ ಮಾನಹಾನಿಕರ ಹೇಳಿಕೆ ಆರೋಪ: ಸುನೀಲ್ ಕುಮಾರ್ ಮೇಲಿನ ಕೇಸ್ ರದ್ಧತಿಗೆ ಹೈಕೋರ್ಟ್ ನಕಾರ - Sunil Kumar