ಪುತ್ತೂರು(ದಕ್ಷಿಣ ಕನ್ನಡ): ಕಾರಿನಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಆರೋಪಿಗಳು ಭಜರಂಗದಳ ಸಂಘಟನೆಯ ಕಾರ್ಯಕರ್ತರನ್ನು ಕಂಡು, ಕಾರು ಮತ್ತು ದನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಪುತ್ತೂರಿನ ಕಬಕ ಅಡ್ಯಲಾಯ ದೈವಸ್ಥಾನದ ಸಮೀಪವೇ ಘಟನೆ ನಡೆದಿದೆ. ಕಾರಿನಲ್ಲಿ ನಾಲ್ಕು ಗೋವುಗಳು ಪತ್ತೆಯಾಗಿವೆ.
ಬಜರಂಗದಳ ಕಬಕದ ಕಾರ್ಯಕರ್ತರು ಗೋವುಗಳನ್ನು ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದು, ಕಾರು ತಡೆಯಲು ಪ್ರಯತ್ನಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಜಖಂಗೊಂಡಿದೆ. ಪರಿಶೀಲನೆ ವೇಳೆ ಎರಡು ದನ ಹಾಗೂ ಎರಡು ಕರುಗಳು ಪತ್ತೆಯಾಗಿವೆ. ಜಾನುವಾರುಗಳ ಕಾಲುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿರುವುದು ಕಂಡುಬಂದಿದೆ.
ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣಾ ಪೊಲೀಸ್ ಅಧಿಕಾರಿಗಳು ಗೋವುಗಳು ಮತ್ತು ಜಖಂಗೊಂಡ ವಾಹನವನ್ನು ಠಾಣೆಗೆ ಸಾಗಿಸಿದ್ದಾರೆ. ಭಜರಂಗದಳ ಕಾರ್ಯಕರ್ತರು ಗೋವುಗಳಿಗೆ ನೀರು, ಮೇವು ನೀಡಿದ್ದಾರೆ.
ಇದನ್ನೂ ಓದಿ: ವಿಜಯಪುರ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 110 ಕ್ಕೂ ಹೆಚ್ಚು ಗೋವುಗಳ ರಕ್ಷಣೆ