ಬೆಂಗಳೂರು : ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧದ ಅಪಪ್ರಚಾರ ಮಾಡಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಏಪ್ರಿಲ್ 29 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖುದ್ದು ಹಾಜರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಪಪ್ರಚಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ಖಾಸಗಿ ದೂರು ನೀಡಿತ್ತು. ದೂರಿನ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಪ್ರಕರಣದ ಪ್ರತಿವಾದಿಗಳಾದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಮಾರ್ಚ್ 28ಕ್ಕೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು.
ಗುರುವಾರ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯಕ್ಕೆ ರಾಹುಲ್ ಗಾಂಧಿ ಪರ ವಕೀಲರು ಹಾಜರಾಗಿ, ನಮ್ಮ ಕಕ್ಷಿದಾರರು ಲೋಕಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಆದ್ದರಿಂದ ಖುದ್ದು ಹಾಜರಿಗೆ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಅಂಶವನ್ನು ಪರಿಗಣಿಸಿದ ನ್ಯಾಯಾಧೀಶರು, ಜೂನ್ 1 ರಂದು ಖುದ್ದು ಹಾಜರಾಗಬೇಕು ಎಂದು ಸೂಚನೆ ನೀಡಿತು.
ದೂರುದಾರರ ಪರ ವಕೀಲರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿಲ್ಲ ಎಂದು ವಿವರಿಸಿದರು. ಈ ವೇಳೆ ನ್ಯಾಯಪೀಠ, ಏಪ್ರಿಲ್ 29 ರಂದು ಖುದ್ದು ಹಾಜರಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು.
ಪ್ರಕರಣದ ಹಿನ್ನೆಲೆ: ಕಳೆದ ರಾಜ್ಯ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಅಂದಿನ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು 40% ಕಮಿಷನ್ ಮತ್ತಿತರ ಆರೋಪಗಳನ್ನು ಮಾಡಿದ್ದರು. ಅಲ್ಲದೇ, ಭ್ರಷ್ಟಾಚಾರದ ಆರೋಪದ ಜಾಹೀರಾತು ನೀಡಿದ್ದರು. ಇದರಿಂದಾಗಿ ಬಿಜೆಪಿಗೆ ಹಾನಿಯಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿತ್ತು.
ಇದನ್ನೂ ಓದಿ: ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಣೆ - High Court