ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ಶಾಸಕ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಣೆಯಾದ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿದ್ದ ರೇವಣ್ಣರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದರು. ರೇವಣ್ಣರನ್ನು ವಿಧಾನಸೌಧ ಬಳಿಯಿರುವ ಎಸ್ಐಟಿ ಕಚೇರಿಗೆ ಕರೆತಂದಿದ್ದಾರೆ.
ಹೆಚ್.ಡಿ. ರೇವಣ್ಣ ಪುತ್ರ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಹಿಳೆಯನ್ನು ಅಪಹರಿಸಿದ ಆರೋಪ ರೇವಣ್ಣ ಅವರ ಮೇಲಿದೆ. ಸಂತ್ರಸ್ತೆಯ ಪುತ್ರ ನೀಡಿದ್ದ ದೂರಿನ ಅನ್ವಯ ಮೇ 2ರಂದು ಮೈಸೂರು ಜಿಲ್ಲೆಯ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಹೆಚ್.ಡಿ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರಾಕರಿಸಿತ್ತು. ಜಾಮೀನು ಅರ್ಜಿ ವಿಚಾರಣೆಯನ್ನು ಮೇ 6 ಕ್ಕೆ ಮುಂದೂಡಿತ್ತು. ಒಂದೂವರೆ ಗಂಟೆಗಳ ಸುದೀರ್ಘ ವಾದ-ಪ್ರತಿವಾದ ಆಲಿಸಿ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಕೋರ್ಟ್ ಸೋಮವಾರಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ. ಜಾಮೀನು ನಿರಾಕರಣೆಯಾಗುತ್ತಿದ್ದಂತೆ ದೇವೇಗೌಡರ ನಿವಾಸಕ್ಕೆ ಹೆಚ್.ಡಿ. ರೇವಣ್ಣ ಭೇಟಿ ನೀಡಿದ್ದರು. 5-6 ಅಧಿಕಾರಿಗಳ ಎಸ್ಐಟಿ ತಂಡ ಅಲ್ಲಿಗೆ ತೆರಳಿ ರೇವಣ್ಣರನ್ನು ಬಂಧಿಸಿದೆ.
ರೇವಣ್ಣ ಬಂಧನವಾಗಿದೆ ಎಂದ ಸಿಎಂ ಸಿದ್ದರಾಮಯ್ಯ: ಪ್ರಕರಣದ ಬಗ್ಗೆ ಬೆಳಗಾವಿಯ ಚಿಕ್ಕೋಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ''ಬೇಲ್ ಅರ್ಜಿ ವಜಾ ಆಗಿದ್ದರಿಂದ ರೇವಣ್ಣ ಬಂಧನವಾಗಿದೆ. ಈ ಪ್ರಕರಣದಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ. ಏಕೆಂದರೆ, ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು'' ಎಂದರು.
ಗದಗದಲ್ಲಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ''ಮಾಜಿ ಮಂತ್ರಿಗಳಾದ ರೇವಣ್ಣರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಕಾನೂನು ತನ್ನ ಕ್ರಮ ತೆಗೆದುಕೊಂಡಿದೆ. ಕೆಲವು ಪುರಾವೆ ಲಭ್ಯವಾಗಿರುವುದರಿಂದ ಬಂಧನ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣರನ್ನು ಕೂಡ ಅವರು ಎಲ್ಲಿಯೇ ಇದ್ದರೂ ಸಹ ಬಂಧಿಸುವ ಕಾರ್ಯ ಜಾರಿಯಲ್ಲಿದೆ'' ಎಂದು ತಿಳಿಸಿದರು.
ಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದ ಹೀಗಿತ್ತು: ಇಂದು ಬೆಳಗ್ಗೆ ಮುಂದೂಡಿದ್ದ ಜಾಮೀನು ಅರ್ಜಿ ವಿಚಾರಣೆ ಮುಂದುವರೆಸಿದ ನ್ಯಾಯಾಲಯವು, ಕಲಾಪ ಆರಂಭವಾಗುತ್ತಿದ್ದಂತೆ ಪ್ರಕರಣದ ಸರ್ಕಾರಿ ವಿಶೇಷ ಅಭಿಯೋಜಕ (ಎಸ್ಪಿಪಿ) ಬಿ.ಎನ್. ಜಗದೀಶ್, ಮುಚ್ಚಿದ ಲಕೋಟೆಯಲ್ಲಿ ಲಿಖಿತ ಆಕ್ಷೇಪಣೆ ಸಲ್ಲಿಸಿದರು. ಮುಚ್ಚಿದ ನ್ಯಾಯಾಲಯದ ಕೊಠಡಿಯಲ್ಲಿ ಕಲಾಪ ಮಾಡಲು ಅನುಮತಿ ನೀಡಬೇಕೆಂಬ ಮನವಿಗೆ ಆಕ್ಷೇಪಿಸಿದ ರೇವಣ್ಣ ಪರ ವಕೀಲ ಮೂರ್ತಿ ಡಿ. ನಾಯ್ಕ್, ಪ್ರಕರಣವನ್ನು ಅನಗತ್ಯವಾಗಿ ವಿಜೃಂಭಿಸಲು ಎಸ್ಐಟಿ ಪ್ರಯತ್ನಿಸುತ್ತಿದೆ. ಈ ಪ್ರಕರಣದಲ್ಲಿ ನಾವು ಏನನ್ನೂ ಮುಚ್ಚಿಡುವ ಅಗತ್ಯವಿಲ್ಲ. ಇಲ್ಲಿ ಅತ್ಯಾಚಾರ ಪ್ರಕರಣದ ಸಾಕ್ಷ್ಯ ವಿಚಾರಣೆ ನಡೆಯುತ್ತಿಲ್ಲ. ತೆರೆದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು. ಇದರಲ್ಲಿ ನಿರಾಧಾರವಾದ ಅಪಹರಣ ಆರೋಪ ಮಾತ್ರವಿದೆ. ಇನ್ ಕ್ಯಾಮರಾ ಬಗ್ಗೆ ನಂತರ ತೀರ್ಮಾನಿಸೋಣ ಎಂದಾಗ ನ್ಯಾಯಾಲಯವು ವಾದ ಮಂಡನೆಗೆ ಅವಕಾಶ ನೀಡಿತು.
ಅರ್ಜಿದಾರ ಪರ ವಾದ ಮಂಡಿಸಿದ ಮೂರ್ತಿ ಡಿ. ನಾಯ್ಕ್, ಐಪಿಸಿ ಸೆಕ್ಷನ್ 364A ಕಿಡ್ನ್ಯಾಪ್ ಪ್ರಕರಣ ಕಕ್ಷಿದಾರರ ಮೇಲೆ ಅನ್ವಯವಾಗುವುದಿಲ್ಲ. ಏ.29ರಂದು ಘಟನೆಯಾಗಿರುವುದಾಗಿ ಮೇ 2 ರಂದು ಎಫ್ಐಆರ್ ದಾಖಲಾಗಿದೆ. ನಿನ್ನೆಯಷ್ಟೇ ಜಾಮೀನು ರಹಿತ ಆರೋಪಗಳಿಲ್ಲವೆಂದು ಎಸ್ಐಟಿ ಹೇಳಿತ್ತು. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ನೀಡಿತ್ತು. ಆದರೆ, ಈಗ ಜಾಮೀನು ರಹಿತ ಆರೋಪವಿರುವ ಕೇಸ್ ದಾಖಲಿಸಿದೆ. ಎಸ್ಐಟಿ ಕ್ರಮದ ಹಿಂದಿರುವ ಉದ್ದೇಶ ಅರ್ಥಮಾಡಿಕೊಳ್ಳಬೇಕು. ಸೆಕ್ಷನ್ 363 ಹಾಗೂ 365 ಎರಡೂ 7 ವರ್ಷಗಳೊಳಗಿನ ಅಪರಾಧಗಳಾಗಿದ್ದು ಸೆಕ್ಷನ್ 364A ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಗೂ ಅವಕಾಶವಿರುವ ಅಪರಾಧವಾಗಿದೆ. ಜಾಮೀನು ಸಿಗಬಾರದೆಂದೇ ಅನ್ವಯವಾಗದ ಸೆಕ್ಷನ್ ಹಾಕಿದ್ದಾರೆ. ರೇವಣ್ಣ ಸಾಹೇಬರು ಕರೆದುಕೊಂಡು ಬಾ ಅಂದಿದ್ದಾರೆ. ಈ ಪದ ಬಿಟ್ಟರೆ ರೇವಣ್ಣ ವಿರುದ್ಧ ಯಾವುದೇ ಆರೋಪವಿಲ್ಲ ಎಂದು ವಾದ ಮಂಡಿಸಿದರು.
ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಆರೋಪಿಯಲ್ಲ. ಪ್ರಕರಣದ A2 ಆರೋಪಿಗೂ ಹೆಚ್.ಡಿ.ರೇವಣ್ಣಗೂ ಸಂಬಂಧವಿಲ್ಲ. ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ದೇಶದೆಲ್ಲೆಡೆ ಪ್ರಚಾರವಾಗಿದೆ. ರಾಜಕೀಯ, ಹಣಕಾಸಿನ ಬಲ ಬಳಸಿ ಈ ಕೃತ್ಯ ಮಾಡಿದ್ದಾರೆ. ಈ ಕೇಸಿಗೆ ಸಂಬಂಧವಿಲ್ಲದ ಅಂಶಗಳನ್ನೆಲ್ಲಾ ಎಸ್ಐಟಿ ಆಕ್ಷೇಪಣೆಯಲ್ಲಿ ಉಲ್ಲೇಖಿಸಿದೆ. ರೇವಣ್ಣ ಅವರ ಮೇಲಿನ ಆರೋಪಕ್ಕೂ ಎಸ್ಐಟಿ ಆಕ್ಷೇಪಣೆಗೂ ಸಂಬಂಧವಿಲ್ಲ. ರಾಜಕೀಯ ದ್ವೇಷದಿಂದ ತನಿಖೆ ನಡೆಯುತ್ತಿದೆ. ಕೆಲವೊಮ್ಮೆ ಪೊಲೀಸರು ಸ್ವತಂತ್ರವಾಗಿ ತನಿಖೆ ನಡೆಸದಿರುವುದು ದುರದೃಷ್ಟಕರ. ಹೀಗಾಗಿ ಆರೋಪಿಯು ಮುಗ್ಧ ಎಂದು ಸಾಬೀತುಮಾಡಲು ಅವಕಾಶ ನೀಡಬೇಕು. ಈ ಕಾರಣಕ್ಕಾಗಿಯೇ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ವಾದ ಮಾಡಿದರು.
ವಾದ ಮುಂದುವರೆಸಿದ ರೇವಣ್ಣ ಪರ ವಕೀಲರು, ಎರಡು ತಿಂಗಳು ಕಸ್ಟಡಿಯಲ್ಲಿಟ್ಟು ತನಿಖೆ ನಡೆಸಬೇಕೆಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ರೀತಿಯ ಹೇಳಿಕೆ ನೀಡುವ ಮೂಲಕ ತನಿಖೆಗೆ ದಿಕ್ಕು ತೋರಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ವೀಸಾ ಕೊಟ್ಟಿದ್ಯಾಕೆಂದು ಕೇಳಿದ್ದಾರೆ. ಚುನಾವಣೆ ವೇಳೆ ರಾಜಕೀಯ ಲಾಭ ಪಡೆಯಲು ಯತ್ನ ನಡೆಯುತ್ತಿದೆ. ಎಸ್ಐಟಿ ತನಿಖೆಗೆ ಸಹಕರಿಸಲು ರೇವಣ್ಣ ಸಿದ್ಧರಿದ್ದಾರೆ ಎಂದರು.
ಎಸ್ಪಿಪಿ ಬಿ.ಎನ್. ಜಗದೀಶ್ ಮಾತನಾಡಿ, ಹೆಚ್.ಡಿ. ರೇವಣ್ಣ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯರಾಗಿದ್ದಾರೆ. ಹೀಗಾಗಿ ಮಹಿಳೆಯನ್ನು ಅಪಹರಣ ಮಾಡಿರಬಹುದು. ಬಿಹಾರದಲ್ಲಿ ನಡೆಯುತ್ತಿದ್ದ ಘಟನೆ ಇಲ್ಲಿ ನಡೆದಿದೆ. ಇದು ಇನ್ನೂ ಯಾವುದಾದರೂ ಮಹಿಳೆಗೆ ನಡೆದಿದೆಯೋ ತಿಳಿಯಬೇಕಿದೆ. ಮಹಿಳೆಯನ್ನು ಕರೆತಂದು ಆಕೆಯ ಹೇಳಿಕೆ ಪಡೆಯಬೇಕಿದೆ. ರೇವಣ್ಣ ವಿಚಾರಣೆಗೊಳಪಡಿಸದೇ ಮಹಿಳೆಯನ್ನು ಹುಡುಕಿ ಹೇಳಿಕೆ ಪಡೆಯಲಾಗುವುದಿಲ್ಲ ಎಂದರು.
ಉತ್ತರ ಕರ್ನಾಟಕದಲ್ಲಿ ಪ್ರಚಾರ ಮಾಡುತ್ತಿರುವುದಾಗಿ ಸಮಯ ಕೇಳಿದ್ದಾರೆ. ವಿಚಾರಣೆಗೆ ಹಾಜರಾಗಲು ಹೆಚ್.ಡಿ. ರೇವಣ್ಣ ಸಮಯ ಕೇಳಿದ್ದಾರೆ. ಇದು ಅವರು ಸಂಪೂರ್ಣ ಸತ್ಯ ಹೇಳುತ್ತಿಲ್ಲವೆಂದು ತೋರಿಸುತ್ತಿದೆ. ಸಂತ್ರಸ್ತೆ ಪುತ್ರ 20 ವರ್ಷದವನಾಗಿದ್ದು ದೂರು ನೀಡಿದ್ದಾನೆ. ಸೆಕ್ಷನ್ 363 ಸೇರಿಸದಿರುವುದನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಎಸ್ಪಿಪಿ ಮನವಿ ಮಾಡಿದರು. ಒಂದೂವರೆ ಗಂಟೆಗಳ ವಾದ ಪ್ರತಿವಾದ ಆಲಿಸಿ ಕೆಲ ಕಾಲ ತೀರ್ಪನ್ನು ಕಾಯ್ದಿರಿಸಿದ ಬಳಿಕ ಅಂತಿಮವಾಗಿ ನಿರೀಕ್ಷಣಾ ಜಾಮೀನು ಅರ್ಜಿಯನ್ನ ವಜಾಗೊಳಿಸಿ ಸೋಮವಾರಕ್ಕೆ ವಿಚಾರಣೆಯನ್ನ ನ್ಯಾಯಾಲಯ ಮುಂದೂಡಿತು.