ಬೆಂಗಳೂರು : ಮಂಗಳೂರಿನ ಸೇಂಟ್ ಜೆರೋಸಾ ಪ್ರೌಢಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಆರೋಪಿಗಳಿಗೆ ನೀಡಿದ್ದ ಮಧ್ಯಂತರ ಜಾಮೀನನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಖಾಯಂಗೊಳಿಸಿದೆ.
ಜಾಮೀನು ಕೋರಿ ಆರೋಪಿಗಳಾಗಿರುವ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಕಾಮತ್, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಹಾಗೂ ಸ್ಥಳೀಯ ಸಂಸ್ಥೆ ಸದಸ್ಯರಾದ ಶರಣ್ ಕುಮಾರ್ ಅಲಿಯಾಸ್ ಶರಣ್ ಪಂಪ್ವೆಲ್, ಸಂದೀಪ್ ಮತ್ತು ಭರತ್ ಕುಮಾರ್ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಮಂಗಳವಾರ ನೀಡಿದ್ದ ಮಧ್ಯಂತರ ಜಾಮೀನನ್ನು ಖಾಯಂಗೊಳಿಸಿದ್ದಾರೆ.
ವಾಟ್ಸಾಪ್ನಲ್ಲಿ ವೈರಲ್ ಆಗಿರುವ ಆಡಿಯೋ ಸಂದೇಶಗಳನ್ನು ಆಧರಿಸಿ, ದೂರು ದಾಖಲಿಸಲಾಗಿದೆ. ಆಡಿಯೋ ಸಂದೇಶವನ್ನು ಯಾರು ಪ್ರಕಟಿಸಿದ್ದಾರೆ ಅಥವಾ ಹಂಚಿಕೆ ಮಾಡಿದ್ದಾರೆ ಎಂಬುದನ್ನು ತನಿಖೆಯ ಸಂದರ್ಭದಲ್ಲಿ ತಿಳಿಯಬೇಕಿದೆ. ಈ ಆಡಿಯೋದಲ್ಲಿ ಶಾಲೆಯ ಆವರಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಿಸಲು ಪ್ರಚೋದನೆ ನೀಡಲಾಗಿದೆ. ಪ್ರಾಸಿಕ್ಯೂಷನ್ನ ಇಡೀ ಪ್ರಕರಣವು ಎಲೆಕ್ಟ್ರಾನಿಕ್ ಸಾಕ್ಷ್ಯ ಅವಲಂಬಿಸಿದ್ದು, ದೂರುದಾರ ಅನಿಲ್ ಜೆರಾಲ್ಡ್ ಲೋಬೊ ಅವರು ಅದನ್ನೇ ಆಧರಿಸಿ ದೂರು ಸಲ್ಲಿಸಿದ್ದಾರೆ. ಚರ್ಚೆಯ ಭಾಗವಾಗಿ ವೈರಲ್ ಆಗಿರುವ ಆಡಿಯೋ ಸಂದೇಶವನ್ನು ಪರಿಗಣಿಸಿದರೆ ಅರ್ಜಿದಾರರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯ ಕಾಣುತ್ತಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೇ, ಅರ್ಜಿದಾರರಿಗೆ ಜಾಮೀನು ನೀಡುವುದರಿಂದ ಸ್ಥಳೀಯವಾಗಿ ಅವರು ಕೋಮುಗಲಭೆಗೆ ಪ್ರಚೋದನೆ ನೀಡಬಹುದು ಎಂಬ ಏಕೈಕ ಆತಂಕವನ್ನು ಪ್ರಾಸಿಕ್ಯೂಷನ್ ವ್ಯಕ್ತಪಡಿಸಿದೆ. ಇದಕ್ಕೆ ಷರತ್ತುಗಳನ್ನು ವಿಧಿಸಿ ಅವರಿಗೆ ಜಾಮೀನು ನೀಡಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಷರತ್ತುಗಳು: ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ಒದಗಿಸಬೇಕು. ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು. ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಬೆದರಿಕೆ ಅಥವಾ ಆಮಿಷ ಒಡ್ಡಬಾರದು. ಇಂಥಹದ್ದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಈ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಅರ್ಜಿದಾರರ ಜಾಮೀನು ರದ್ದಾಗಲಿದೆ ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪಕ್ಕದಲ್ಲಿ ಹೆದ್ದಾರಿ; ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಸೂಚನೆ