ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ತನ್ನ ಪಾಲಿನ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ಇಂದು ಸಂಜೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ರಾಜ್ಯ ಘಟಕದ ಮಟ್ಟದಲ್ಲಿ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಇಂದೇ ಹೈಕಮಾಂಡ್ಗೆ ಕಳುಹಿಸಿಕೊಡಲಾಗುತ್ತದೆ.
ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಗೆ ಮೂರು ಹಾಗು ಜೆಡಿಎಸ್‌ಗೆ 1 ಸ್ಥಾನ ಗಳಿಸಲಿವೆ. ಪಕ್ಷದ ವರಿಷ್ಠರ ಸೂಚನೆಯಂತೆ ಮೂರು ಸ್ಥಾನಗಳಿಗೂ ತಲಾ ಮೂರು ಹೆಸರುಗಳಂತೆ 9 ಹೆಸರನ್ನು ಹೈಕಮಾಂಡ್ಗೆ ಕಳುಹಿಸಿಕೊಡಬೇಕಿದ್ದು, ಅದಕ್ಕಾಗಿ ಅಭ್ಯರ್ಥಿಗಳ ಹೆಸರು ಕುರಿತು ಚರ್ಚಿಸಲು ಸಂಜೆ ಕೋರ್ ಕಮಿಟಿ ಸಭೆ ಕರೆಯಲಾಗಿದೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಮೂರು ಸ್ಥಾನಗಳಿಗೆ 30ಕ್ಕೂ ಹೆಚ್ಚಿನ ಆಕಾಂಕ್ಷಿಗಳಿದ್ದು, ಅಭ್ಯರ್ಥಿಗಳ ಆಯ್ಕೆ ರಾಜ್ಯ ಬಿಜೆಪಿಗೆ ಕಗ್ಗಂಟಾಗಿದೆ. ಹಾಲಿ ಸದಸ್ಯರಾಗಿರುವ ರವಿಕುಮಾರ್, ರಘುನಾಥ ಮಲ್ಕಾಪುರೆ ಪುನರಾಯ್ಕೆ ಬಯಸಿದ್ದು, ನಿರ್ಗಮಿತ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ಸಿ.ಟಿ.ರವಿ, ನಟಿಯರಾದ ತಾರಾ ಅನೂರಾಧ, ಶೃತಿ, ಮಾಳವಿಕಾ ಅವಿನಾಶ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ, ಮಾಜಿ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದಾರೆ. ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಹಾಗಾಗಿ ಮೂರು ಸ್ಥಾನಗಳಿಗೆ ಪ್ರತ್ಯೇಕವಾಗಿ ಮೂರು ಮೂರು ಹೆಸರುಗಳನ್ನು ಅಂತಿಮಗೊಳಿಸುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.
ಪಕ್ಷದ ಮೂಲಗಳ ಪ್ರಕಾರ ಇಬ್ಬರು ಪುರುಷ ಹಾಗು ಓರ್ವ ಮಹಿಳೆಯನ್ನು ಚುನಾವಣೆಗೆ ಪರಿಗಣಿಸಲಾಗುತ್ತದೆ ಎನ್ನಲಾಗಿದೆ. ಆದರೆ, ಎಲ್ಲವೂ ಹೈಕಮಾಂಡ್ ನಿರ್ಧಾರದ ಮೇಲೆ ಅವಲಂಭಿಸಿದೆ. ರಾಜ್ಯ ಘಟಕ ಕಳುಹಸಿಕೊಡುವ ಪಟ್ಟಿಯ ಜೊತೆಗೆ ಪ್ರತ್ಯೇಕವಾಗಿ ಹೈಕಮಾಂಡ್ ಕೂಡ ಕೆಲವೊಂದು ಹೆಸರನ್ನು ಗಣನೆಯಲ್ಲಿಟ್ಟುಕೊಂಡಿದೆ. ಅಚ್ಚರಿ ಆಯ್ಕೆಯೂ ತಳ್ಳಿಹಾಕುವಂತಿಲ್ಲ.
ಇದನ್ನೂ ಓದಿ: ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಕೊಡುಗೆ ಶೂನ್ಯ: ಹೆಚ್.ಡಿ.ಕುಮಾರಸ್ವಾಮಿ - Council Election