ಬೆಂಗಳೂರು : ವಾಲ್ಮೀಕಿ ನಿಗಮದ ಹಣ ತೆಲಂಗಾಣ ಚುನಾವಣೆಗೆ ಬಳಕೆಯಾಗಿದೆ ಎನ್ನುವ ಬಿಜೆಪಿ ಆರೋಪ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿದ್ದು, ಸದನದಲ್ಲಿ ಗದ್ದಲ ಕೋಲಾಹಲ ಸೃಷ್ಟಿಯಾಗಿದ್ದರಿಂದ ಕಲಾಪವನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಯಿತು.
ಕಲಾಪ ಆರಂಭವಾಗುತ್ತಿದ್ದಂತೆ ತೆಲಂಗಾಣ ಚುನಾವಣೆಗೆ ಹಣ ಬಳಕೆ ಆರೋಪ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯರು ಸದನದಲ್ಲಿ ಗದ್ದಲವೆಬ್ಬಿಸಿದರು. ಇದಕ್ಕೆ ಅಸಮಧಾನಗೊಂಡ ಉಪಸಭಾಪತಿ ಪ್ರಾಣೇಶ್, ಇದು ಚಿಂತಕರಚಾವಣಿ. ಇತಿಹಾಸ ಹಾಳು ಮಾಡಬೇಡಿ, ಇಂತಹ ವರ್ತನೆ ಮೂಲಕ ಹೊರಗಡೆ ಏನು ಸಂದೇಶ ಕೊಡುತ್ತೀರಿ?. ಗಲಾಟೆ ಸದನ ಎಂದಾ? ಎಂದರು. ಇದಕ್ಕೆ ಪ್ರತಿಯಾಗಿ ಸಭಾನಾಯಕ ಬೋಸರಾಜ್ ಎರಡೂ ಕಡೆ ಇದನ್ನ ಪಾಲಿಸಬೇಕು? ಎಂದರು.
ಈ ವೇಳೆ ಕಾಂಗ್ರೆಸ್ ಸದಸ್ಯರು, ಪೀಠದ ಕಡೆಯಿಂದ ತಾರತಮ್ಯದ ಆರೋಪ ಮಾಡಿದರು. ಮೂರು ಪಕ್ಷದವರಿಗೆ ಒಬ್ಬರಾದ ನಂತರ ಒಬ್ಬರಿಗೆ ಮಾತನಾಡಲು ಅವಕಾಶ ಕೊಡಬೇಕು, ಇಲ್ಲಿ ಹಾಗಾಗುತ್ತಿಲ್ಲ ಎಂದರು. ಇದಕ್ಕೆ ಸ್ಪಷ್ಟೀಕರಣ ನೀಡಿದ ಪ್ರಾಣೇಶ್, ನಿಲುವಳಿ ತಂದವರಿಗೆ ಸಹಜವಾಗಿ ಹೆಚ್ಚಿನ ಸಮಯ ನೀಡಲಾಗಿದೆ. ಆಡಳಿತ ಪಕ್ಷಕ್ಕೂ ಅವಕಾಶ ನೀಡಲಾಗಿದೆ. ಇದು ನಿಯಮ 68 ರ ಅಡಿ ಬಂದಿಲ್ಲ, ಪೀಠ ಪರಿವರ್ತಿಸಿದೆ. ಎಲ್ಲರಿಗೂ ಅವಕಾಶ ಸಿಗಲಿ ಎಂದೇ ಪರಿವರ್ತನೆ ಮಾಡಿದೆ ಎಂದು ಹೇಳಿದರು.
ನಂತರ ತೆಲಂಗಾಣ ಚುನಾವಣೆಗೆ ಹಣ ಹೋಗಿದೆ ಎನ್ನುವ ಪ್ರಸ್ತಾಪ ಕಡತದಿಂದ ತೆಗೆಯಲು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಇ.ಡಿ ತಂದಿದ್ದಾರೆ, ಹೇಡಿಗಳು ಎಂದು ಟೀಕಿಸಿದರು. ಈ ವೇಳೆ ಆಡಳಿತ, ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸಿ.ಟಿ ರವಿ ಮಾತನಾಡಿ, ಸರ್ಕಾರಕ್ಕೆ ಉತ್ತರ ಕೊಡುವ ದಮ್ಮಿಲ್ಲವೇ? ಎಂದು ಛೇಡಿಸಿದರು. ಬಿಜೆಪಿ ವಾಗ್ದಾಳಿಗಳ ನಡುವೆಯೂ ಕಾಂಗ್ರೆಸ್ ಮುಖ್ಯ ಸಚೇತಕ ಸಲೀಂ ಅಹಮದ್, ರವಿಕುಮಾರ್ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಕಿಡಿಕಾರಿದ ವಿರೋಧ ಪಕ್ಷದ ಉಪ ನಾಯಕ ಸುನೀಲ್ ವಲ್ಯಾಪುರೆ, ಭ್ರಷ್ಟಾಚಾರ ಮಾಡುವವರು ನೀವು, ನಾವು ಕ್ಷಮೆ ಕೇಳಬೇಕಾ? ಏನು ವ್ಯವಸ್ಥೆ ಇದೆ ಎಂದು ತಿರುಗೇಟು ನೀಡಿದರು. ಸಿಟಿ ರವಿ ಮಾತನಾಡಿ, ಕ್ಷಮೆ ಯಾಕೆ, ಚುನಾವಣೆಗೆ ಹೋಗದಿದ್ದರೆ ಯಾವುದಕ್ಕೆ ಹೋಗಿದೆ ಹೇಳಲಿ. ಹೆಚ್ಚಿನ ಮಾಹಿತಿ ಆಡಳಿತ ಪಕ್ಷಕ್ಕೆ ಇರಬೇಕು, ಇದ್ದರೆ ಬೆಳಕು ಚೆಲ್ಲಲಿ, ನಿಮ್ಮ ವರ್ತನೆ ಸಂಸದೀಯ ಪ್ರಜಾಪ್ರಭುತ್ವಕ್ಕೆ ಗೌರವ ತರುವುದಿಲ್ಲ, ಆಡಳಿತ ಪಕ್ಷಕ್ಕೆ ಹೆಚ್ಚಿನ ತಾಳ್ಮೆ ಇರಬೇಕು? ಎಂದರು.
ಸರ್ಕಾರದ ಆರೋಪಕ್ಕೆ ಲಾಡ್ ಆಕ್ಷೇಪ: ಬಿಜೆಪಿ ಆರೋಪಕ್ಕೆ ಆಕ್ಷೇಪಿಸಿದ ಸಚಿವ ಸಂತೋಷ್ ಲಾಡ್, ಪದೇ ಪದೆ ತೆಲಂಗಾಣ ಚುನಾವಣೆ ಉಲ್ಲೇಖ ಸರಿಯಲ್ಲ, ನಿಯಂತ್ರಿಸುವ ಕೆಲಸ ಮಾಡಿ ಎಂದರು. ಕಡತದಿಂದ ತೆಗೆಯಬೇಕು ಎಂದು ಸಲೀಂ ಅಹಮದ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪ ಸಭಾಪತಿಗಳು ಪರಿಶೀಲಿಸಿ ನೋಡುತ್ತೇವೆ, ಹೇಳಿದ್ದೆಲ್ಲಾ ತೆಗೆದುಹಾಕಲು ಆಗಲ್ಲ, ಅದಕ್ಕಾಗಿ ನಾವು ಕುಳಿತಿಲ್ಲ, ಕಡತದಿಂದ ತೆಗೆಯಲು ಆಗಲ್ಲ, ಹಾಗೆ ಮಾಡುತ್ತಾ ಹೋದರೆ ಎಲ್ಲವನ್ನೂ ತೆಗೆಯುತ್ತಾ ಕೂರಬೇಕಾಗುತ್ತೆ ಎಂದು ಕಾಂಗ್ರೆಸ್ ಬೇಡಿಕೆ ತಿರಸ್ಕರಿಸಿದರು.
ಉತ್ತರ ನೀಡಲು ನಿಮಗೆ ಅವಕಾಶವಿದೆ: ಇದಕ್ಕೆ ಕಿಡಿಕಾರಿದ ಕಾಂಗ್ರೆಸ್ ಸದನದಲ್ಲಿ ಗದ್ದಲವೆಬ್ಬಿಸಿ, ಆಣೆ ಪ್ರಮಾಣ ಸಂವಿಧಾನದಲ್ಲಿ ಬಳಸಬಹುದಾ? ಎಂದು ಪ್ರಶ್ನಿಸಿದರು. ಆಡಳಿತ ಪಕ್ಷಕ್ಕೆ ಪಾಠ ಮಾಡಿದ ಪ್ರಾಣೇಶ್, ಸರ್ಕಾರದ ಬಗ್ಗೆ ಟೀಕಿಸಲು ಎಲ್ಲ ಸದಸ್ಯರಿಗೂ ಹಕ್ಕಿದೆ, ಟೀಕೆ ಮಾಡಿದ ಸಂದರ್ಭದಲ್ಲಿ ಸರ್ಕಾರ ಟೀಕೆಗಳಿಗೆ ಸಮರ್ಥವಾಗಿ ಉತ್ತರ ಕೊಡಬೇಕು. ಅದಕ್ಕಾಗಿಯೇ ಸರ್ಕಾರದ ಉತ್ತರಕ್ಕೆ ಅವಕಾಶವಿದೆ ಎಂದರು. ಆದರೆ ಸಭಾನಾಯಕ ಬೋಸರಾಜ್ ಇದನ್ನು ಒಪ್ಪದೆ, ಸರ್ಕಾರ ಉತ್ತರ ಕೊಡಲು ಅವಕಾಶ ಕೊಡಬಾರದು ಎಂದು ಪ್ಲಾನ್ ಮಾಡಿ ಹೀಗೆ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಮಾತನಾಡಿ, ಯುಬಿಐ ಯಾರ ಅಂಡರ್ ಬರಲಿದೆ, ನಿರ್ಮಲಾ ಸೀತಾರಾಮನ್ ರಾಜೀನಾಮೆ ಎಂದಿದ್ದೇವಾ? ಕೇಂದ್ರದ ತುತ್ತೂರಿಯಂತೆ ಇಲ್ಲಿ ಸಿಎಂ, ರಾಜೀನಾಮೆ, ತೆಲಂಗಾಣ ಎನ್ನುತ್ತಿದ್ದಾರೆ ಎಂದರು. ಇದಕ್ಕೆ ಕಿಡಿಕಾರಿದ ಬಿಜೆಪಿ ಸದಸ್ಯರು ಪುಟ್ಟಣ್ಣ ಸರ್ಕಾರದ ಪರ ಉತ್ತರ ನೀಡುವ ಸ್ಥಾನದಲ್ಲಿಲ್ಲ ಎಂದು ಆಕ್ಷೇಪಿಸಿದರು. ಇದಕ್ಕೆ ಏರಿದ ದನಿಯಲ್ಲಿ ತಿರುಗೇಟು ನೀಡಿದ ಪುಟ್ಟಣ್ಣ ವರ್ತನೆಗೆ ಕೆರಳಿದ ಸಿಟಿ ರವಿ, ಗುಂಡಾಗಿರಿ ಮಾಡುತ್ತೀರಾ? ಎಂದು ಟೀಕಿಸಿದರು. ಸದನದಲ್ಲಿ ಗದ್ದಲ ಹೆಚ್ಚಾಗಿದ್ದರಿಂದ ಸದನ ಸಹಜ ಸ್ಥಿತಿಗೆ ಬಾರದ ಹಿನ್ನಲೆ ಕಲಾಪವನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಲಾಯಿತು.
ಇದನ್ನೂ ಓದಿ : ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ವಾಲ್ಮೀಕಿ ಬಹುಕೋಟಿ ಹಗರಣ: ಆಡಳಿತ-ಪ್ರತಿಪಕ್ಷಗಳ ನಡುವೆ ವಾಗ್ಯುದ್ಧ - Valmiki Corporation Scam