ಬೆಂಗಳೂರು: ಗ್ರಾಮ ಪಂಚಾಯತಿ ಸದಸ್ಯರು ಪಂಚಾಯತಿಗೆ ಸಂಬಂಧಿಸಿದಂತೆ ಪಡೆದಿರುವ ಕಾಮಗಾರಿ ಗುತ್ತಿಗೆ (ಒಪ್ಪಂದ) ಅಸ್ತಿತ್ವದಲ್ಲಿದ್ದರೆ ಮಾತ್ರ ಅವರ ಸದಸ್ಯತ್ವ ರದ್ದುಪಡಿಸಲು ಕಾರಣವಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಬೀರುಹಳ್ಳಿ ಗ್ರಾಮ ಪಂಚಾಯತಿಯ ಗುತ್ತಿಗೆ ಕಾಮಗಾರಿ ಕೆಲಸ ನಿರ್ವಹಿಸಿರುವ ಹಿನ್ನೆಲೆಯಲ್ಲಿ ಅದೇ ಗ್ರಾಪಂ ಸದಸ್ಯ ಬಿ.ಎನ್.ಕುಮಾರ್ ಅವರನ್ನು ಅನರ್ಹಗೊಳಿಸಬೇಕೆಂದು ಕೋರಿ ಅದೇ ಗ್ರಾಮದ ನಿವಾಸಿ ಬಿ.ಟಿ. ಕುಮಾರ್ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಸ್. ಸುನೀಲ್ ದತ್ತ ಯಾದವ್ ಅವರ ಪೀಠ ಆದೇಶಿಸಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ- 1993ರ ಸೆಕ್ಷನ್ 12 (ಹೆಚ್) ಪ್ರಕಾರ ಗ್ರಾ.ಪಂ ಸದಸ್ಯರು, ಅವರ ಪಂಚಾಯತಿಗೆ ಸೇರಿದ ಕಾಮಗಾರಿಗಳು ಗುತ್ತಿಗೆ ಪಡೆದು, ಆ ಗುತ್ತಿಗೆ ಒಪ್ಪಂದ ಅಸ್ತಿತ್ವದಲ್ಲಿ ಇದ್ದರೆ ಮಾತ್ರ ಸದಸ್ಯತ್ವ ಅನರ್ಹಗೊಳಿಸಲು ಕಾರಣವಾಗುವುದು. ಅದು ಬಿಟ್ಟು ಹಿಂದಿನ ವರ್ಷದ ಕಾಮಗಾರಿಗಳು ಅಂದರೆ ಅವರು ಸದಸ್ಯರಾಗುವ ಮುನ್ನ ಕಾಮಗಾರಿಗಳು ನಡೆಸಿ, ಅದನ್ನು ಪೂರ್ಣಗೊಳಿಸಿದ್ದರೆ, ಅದರ ಆಧಾರದ ಮೇಲೆ ಸದಸ್ಯತ್ವ ರದ್ದುಪಡಿಸಲು ಸಾಧ್ಯವಿಲ್ಲ. ಅಧೀನ ನ್ಯಾಯಾಲಯವು ಸಹ ಇದೇ ವ್ಯಾಖ್ಯಾನ ಮಾಡಿ, ಬಿ.ಎನ್. ಕುಮಾರ್ ಅವರ ಅನರ್ಹತೆ ಕೋರಿ ಅರ್ಜಿದಾರರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ತಿರಸ್ಕರಿಸಿದೆ. ಹಾಗಾಗಿ, ಅದರ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯ ಕಂಡುಬರುತಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಬೀರುಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಬಿ.ಎನ್. ಕುಮಾರ್ ಅವರು 2018ರಿಂದ 2020ರ ಜು.3ರ ನಡುವೆ ಪಂಚಾಯತಿಯ ಗುತ್ತಿಗೆ ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗವು ಗ್ರಾ.ಪಂ. ಸದಸ್ಯರ ಆಯ್ಕೆಗೆ 2020 ಜು.7ರಂದು ಚುನಾವಣಾ ಅಧಿಸೂಚನೆ ಹೊರಡಿಸಿತ್ತು. ಅದರಂತೆ ಗ್ರಾಮ ಪಂಚಾಯತಿ ಸದಸ್ಯ ಚುನಾವಣೆಗೆ ಸ್ಪರ್ಧಿಸಿ ಬಿ.ಎನ್. ಕುಮಾರ್ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಸಿ.ಎಂ.ಇಬ್ರಾಹಿಂ ಉಚ್ಚಾಟನೆ: ದೇವೇಗೌಡ, ಕುಮಾರಸ್ವಾಮಿಗೆ ಹೈಕೋರ್ಟ್ ನೋಟಿಸ್ - CM Ibrahim Expel case
ಬಿ.ಎನ್. ಕುಮಾರ್ ಅವರ ಆಯ್ಕೆ ಪ್ರಶ್ನಿಸಿ ಮಂಡ್ಯದ ಕೆ. ಆರ್. ಪೇಟೆಯ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್‌ಗೆ ಬಿ.ಟಿ. ಕುಮಾರ್ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಗ್ರಾಮ ಪಂಚಾಯತಿಯ ಯಾವುದೇ ಕಾಮಗಾರಿ ಗುತ್ತಿಗೆ ಪಡೆದು, ನಿರ್ವಹಿಸಿದವರು ಸದಸ್ಯರಾಗಲು ಅವಕಾಶವಿಲ್ಲ. ಇದೇ ನಿಯಮವನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ-1993ರ ಸೆಕ್ಷನ್ 12(ಹೆಚ್) ಪ್ರತಿಪಾದಿಸುತ್ತದೆ. ಅದರಂತೆ ಬಿ.ಎನ್. ಕುಮಾರ್ ಅವರನ್ನು ಅವರ ಗ್ರಾಪಂ ಸದಸ್ಯತ್ವನ್ನು ಅನರ್ಹಗೊಳಿಸಿ ಆದೇಶಿಸಬೇಕು ಎಂದು ಕೋರಿದ್ದರು. ಆ ಅರ್ಜಿಯನ್ನು ತಿರಸ್ಕರಿಸಿ ಅಧೀನ ನ್ಯಾಯಾಲಯವು 2022ರ ಆ.6ರಂದು ಆದೇಶಿಸಿತ್ತು. ಇದರಿಂದ ಅರ್ಜಿದಾರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.
ಇದನ್ನೂ ಓದಿ: ಸೊಸೆ ಆತ್ಮಹತ್ಯೆಗೆ ಕಾರಣವಾದ ಅತ್ತೆ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಕಾರ - High Court