ಉಡುಪಿ: ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಭಾರಿ ಮಳೆಗೆ ಜಿಲ್ಲೆಯ ವಿವಿಧೆಡೆ ಅಪಾರ ಹಾನಿ ಕೂಡ ಸಂಭವಿಸಿದೆ. ಕಾರ್ಕಳ ತಾಲೂಕಿನ ರೆಂಜಾಳದಲ್ಲಿ ದಾಖಲೆಯ 319.5 ಮಿ.ಮೀಟರ್, ಕಾರ್ಕಳದ ಸಾಣೂರು ಗ್ರಾಮದಲ್ಲಿ 290 ಮಿ.ಮೀ, ಕುಂದಾಪುರ ತಾಲೂಕಿನ ಮಡಾಮಕ್ಕಿಯಲ್ಲಿ 279 ಮಿ.ಮೀ, ಹೆಬ್ರಿ ತಾಲೂಕಿನಲ್ಲಿ 127 ಮಿ.ಮೀ, ಕಾರ್ಕಳ ತಾಲೂಕಿನಲ್ಲಿ 120 ಮಿ.ಮೀ, ಉಡುಪಿ ಜಿಲ್ಲೆಯ ಸರಾಸರಿ 97 ಮಿ.ಮೀ, ಕುಂದಾಪುರ ತಾಲೂಕಿನಲ್ಲಿ 90 ಮಿ.ಮೀ. ಮಳೆಯಾಗಿದೆ.
ಭಾರಿ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ನೆರೆ ಪರಿಸ್ಥಿತಿ ಎದುರಾಗಿದೆ. ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲೂಕಿನಾದ್ಯಂತ ಗಾಳಿ ಸಹಿತ ಮಳೆ ಮುಂದುವರಿದಿದೆ. ಒಟ್ಟು 12 ಮನೆಗಳಿಗೆ ಹಾನಿಯಾಗಿದ್ದು, ಅಂದಾಜು 11 ಲಕ್ಷ ರೂ.ಗಳ ನಷ್ಟವಾಗಿದೆ. ಜಿಲ್ಲೆಯ ಕಾರ್ಕಳದಲ್ಲಿ 3 ಮನೆಗಳು, ಕಾಪುವಿನಲ್ಲಿ ಒಂದು, ಬ್ರಹ್ಮಾವರದಲ್ಲಿ 2, ಕುಂದಾಪುರದಲ್ಲಿ 6 ಸೇರಿದಂತೆ ಒಟ್ಟು 12 ಮನೆಗಳು ಹಾನಿಯಾಗಿರುವ ಕುರಿತು ವರದಿಯಾಗಿದೆ.
ಮನೆಗಳು ಜಲಾವೃತ, ವಿದ್ಯುತ್ ಸಂಪರ್ಕ ಖಡಿತ: ಕುಂದಾಪುರ, ಬೈಂದೂರು ಹಾಲಾಡಿ, ಶಿರಿಯಾರ, ಸಾಬ್ರೈಕಟ್ಟೆ, ತೆಕ್ಕಟ್ಟೆ, ಕೋಟ, ಗಿಳಿಯಾರು, ಸಾಲಿಗ್ರಾಮ ಸೇರಿದಂತೆ ವಿವಿಧ ಭಾಗದಲ್ಲಿನ ಮನೆಗಳು ಜಲಾವೃತವಾಗಿದೆ. ಅಬ್ಬರದ ಮಳೆಗೆ ಕೃಷಿ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿದ್ದು, ರೈತ ಬೆಳೆದ ಸಂಪೂರ್ಣ ಬೆಳೆ ಹಾನಿಯಾಗಿದೆ. ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ವಿದ್ಯುತ್ ಸಂಪರ್ಕ ಖಡಿತಗೊಂಡಿದೆ.
ಜಲಾವೃತವಾದ ಶಾಲೆಗೆ ಬ್ರಹ್ಮಾವರ ತಹಶೀಲ್ದಾರ್ ಭೇಟಿ, ಪರಿಶೀಲನೆ: ನಿರಂತರ ಮಳೆಗೆ ಉಪ್ಪೂರಿನಲ್ಲಿರುವ ಪ್ರಾಥಮಿಕ ಶಾಲೆ ಸಂಪೂರ್ಣ ಜಲಾವೃತವಾಗಿದೆ. ಜಿಲ್ಲಾಡಳಿತ ಮೊದಲೇ ಶಾಲೆಗೆ ರಜೆ ನೀಡಿರುವ ಹಿನ್ನೆಲೆ ವಿದ್ಯಾರ್ಥಿಗಳು ಆಗಮಿಸಿದೇ ಇರುವ ಕಾರಣ ಅಪಾಯ ತಪ್ಪಿದೆ. ವಿಷಯ ತಿಳಿದ ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಗತ್ಯವಿದ್ದರೆ ಉಪ್ಪೂರಿನಲ್ಲಿರುವ ಜನರನ್ನು ಸ್ಥಳಾಂತರ ಮಾಡುತ್ತೇವೆ ಎಂದು ಹೇಳಿದರು.
ಎರಡನೇ ಬಾರಿ ಕಮಲಶಿಲೆ ಬ್ರಾಹ್ಮಿ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜೆ ನದಿ: ಈ ವರ್ಷದಲ್ಲಿ ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಎರಡನೇ ಬಾರಿಗೆ ದೇಗುಗುಲದ ಗರ್ಭಗುಡಿಯ ದೇವಿಯ ಪಾದದವರೆಗೆ ನೀರು ನುಗ್ಗಿದೆ. ದೇಗುಲ ಪ್ರವೇಶಿಸಿದ್ದ ನದಿ ನೀರು ದೇವಿಯ ಪಾದ ಸ್ಪರ್ಶಿಸುತ್ತಿದ್ದಂತೆ ಅರ್ಚಕರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇಂದು ಗಾಳಿ ಸಹಿತ ಭಾರಿ ಮಳೆ: ಕರಾವಳಿ ಜಿಲ್ಲೆಗಳಲ್ಲಿ ಇಂದು (ಶುಕ್ರವಾರ) ಬಿರುಸಿನ ಮಳೆ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜಿಲ್ಲೆಯ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ ಸೂಚಿಸಿದೆ.
ಇದನ್ನೂ ಓದಿ: ಪುತ್ತೂರು: ಬೈಪಾಸ್ ತೆಂಕಿಲದಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಗುಡ್ಡ ಕುಸಿತ, ರಸ್ತೆ ಸಂಪೂರ್ಣ ಬಂದ್ - landslide in puttur