ಬೆಂಗಳೂರು: ''ರಾಜ್ಯದ ಎಲ್ಲಾ ಡ್ಯಾಂಗಳ ಸುರಕ್ಷತೆ ಪರಿಶೀಲನೆಗೆ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ''ಸಮಿತಿ ರಾಜ್ಯದ ಎಲ್ಲಾ ಡ್ಯಾಂಗೆ ಹೋಗಿ ಪರಿಶೀಲಿಸಲು ಸೂಚನೆ ನೀಡಿದ್ದೇನೆ. 15ರಿಂದ 30 ದಿನಗಳಲ್ಲಿ ಸಮಿತಿ ಅಣೆಕಟ್ಟುಗಳ ಸುರಕ್ಷತೆ ಬಗ್ಗೆ ವರದಿ ಕೊಡುತ್ತಾರೆ'' ಎಂದು ತಿಳಿಸಿದರು.
''ತುಂಗಾಭದ್ರಾದಲ್ಲಿ ಡ್ಯಾಂನ 19ನೇ ಕ್ರಸ್ಟ್ ಗೇಟ್ ರಾತ್ರಿ 10.50 ಹಾನಿಯಾಗಿತ್ತು. ರಾತ್ರಿ 11.30 ಗಂಟೆಗೆ ನನಗೆ ವಿಚಾರ ತಿಳಿಯಿತು. ಕೂಡಲೇ ಎಲ್ಲರ ಜೊತೆ ಚರ್ಚಿಸಿದ್ದೇನೆ. ತಕ್ಷಣ ಜಿಲ್ಲಾ ಸಚಿವ ಶಿವರಾಜ್ ತಂಗಡಗಿ ಸ್ಥಳಕ್ಕೆ ಹೋಗಿದ್ದರು. ಸಚಿವರು ಹೋದಾಗ ಡ್ಯಾಂ ಶೇಕ್ ಆಗುತ್ತಿದೆ ಎಂದಿದ್ದರು. ತಾಂತ್ರಿಕ ತಜ್ಞರ ಜೊತೆ ಮಾತನಾಡಿ ಕ್ರಮ ಕೈಗೊಳ್ಳಿ ಸೂಚನೆ ನೀಡಿದ್ದೇನೆ'' ಎಂದರು.
''ಅಣೆಕಟ್ಟಿನಿಂದ ನೀರು ಬಿಡುಗಡೆಗೆ ತಜ್ಞರು ಸಲಹೆ ನೀಡಿದ್ದಾರೆ. ಅದರಂತೆ ಬಿಡುಗಡೆ ಮಾಡಿದ್ದೇವೆ. ಈಗ ದುರಸ್ತಿ ಕೆಲಸ ಆರಂಭಿಸಿದ್ದಾರೆ. ಜಲಾಶಯದಲ್ಲಿ 53 ಟಿಎಂಸಿ ನೀರು ಉಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರೈತರು ಭಯ ಪಡುವುದು ಬೇಡ. ಬಿಡುಗಡೆಯಾದ ನೀರು ಹರಿದು ಹೋಗಲು ಎಲ್ಲಾ ನಾಲೆ ತೆರೆದಿದ್ದೇವೆ. ಅಚ್ಚುಕಟ್ಟು ಪ್ರದೇಶದ ಜನರಿಗೆ ಕಟ್ಟೆಚ್ಚರದಲ್ಲಿರಲು ಸೂಚನೆ ನೀಡಿದ್ದೇವೆ'' ಎಂದು ತಿಳಿಸಿದರು.
''ನಾಲ್ಕೈದು ದಿನಗಳಲ್ಲಿ ಡ್ಯಾಂ ಕ್ರಸ್ಟ್ ಗೇಟ್ ಅನ್ನು ಸರಿ ಪಡಿಸಲು ಯತ್ನಿಸುತ್ತಿದ್ದೇವೆ. ಈ ವಿಚಾರವಾಗಿ ಆರೋಪ ಪ್ರತ್ಯಾರೋಪ ಮಾಡುವುದು ಬೇಡ. ಮೊದಲಿಗೆ ಡ್ಯಾಂ ಗೇಟ್ ಸರಿಯಾಗಲಿ ಆಮೇಲೆ ಮುಂದಿನದ್ದನ್ನು ನೋಡೋಣ. ನಮ್ಮ ಮೊದಲ ಆದ್ಯತೆ ಡ್ಯಾಂ ಗೇಟ್ ಸರಿಪಡಿಸುವುದು. ವಿಪಕ್ಷಗಳು ಏನೂ ಬೇಕಾದರು ಆರೋಪ ಮಾಡಲಿ. ನನ್ನನ್ನು ಬೈಯ್ಯಲಿ, ಸಿಎಂ ಅವರನ್ನು ಬೈಯಲಿ, ಅಧಿಕಾರಿಗಳನ್ನು ಬೈಯಲಿ. ಅವರ ಆರೋಪದ ಬಗ್ಗೆ ಕನಿಷ್ಠ ಗಮನವಿದೆ'' ಎಂದು ತಿರುಗೇಟು ನೀಡಿದರು.
''ಅಣೆಕಟ್ಟಿನಲ್ಲಿ ಅಷ್ಟೊಂದು ಗೇಟ್ ಇವೆ. ಆ ಪೈಕಿ 19ನೇ ಗೇಟ್ ಮಾತ್ರ ಹೀಗಾಗಿದೆ. ಅಧಿಕಾರಿಗಳು ಏನು ಮಾಡುವುದಕ್ಕೆ ಆಗುತ್ತದೆ. ಬೇರೆ ಡ್ಯಾಂಗಳಲ್ಲಿ ಎರಡು ಗೇಟ್ ಇರುತ್ತವೆ. ಇಲ್ಲಿ ಒಂದೇ ಇದೆ. 19ನೇ ಗೇಟ್ ನಲ್ಲಿ ಸುಮಾರು 9,000 ಕ್ಯೂಸೆಕ್ ನೀರು ಹೋಗುತ್ತಿದೆ'' ಎಂದು ತಿಳಿಸಿದರು.
ರಾಜ್ಯಪಾಲರು ಕಾನೂನು ಪ್ರಕಾರ ತೀರ್ಮಾನಿಸುತ್ತಾರೆ: ಪ್ರಾಸಿಕ್ಯುಷನ್ ಸಂಬಂಧ ರಾಜ್ಯಪಾಲರು ನಿರ್ಧಾರ ಕೈಗೊಳ್ಳದೇ ಒರುವ ಬಗ್ಗೆ ಪ್ರತಿಕ್ರಿಯಿಸಿ, ''ರಾಜ್ಯಪಾಲರು ಪ್ರಜ್ಞಾವಂತರು ಇದ್ದಾರೆ. ಹಿರಿಯ ರಾಜಕಾರಣಿಯಾಗಿದ್ದವರು. ಅವರ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಅವರು ಕಾನೂನು ಪ್ರಕಾರ ಹೋಗುತ್ತಾರೆ. ಕಾನೂನು ವಿರುದ್ಧ ತೀರ್ಮಾನ ಕೈಗೊಳ್ಳುವುದಿಲ್ಲ. ಅವರು ಅದರ ಪ್ರಕಾರ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ'' ಎಂದು ತಿಳಿಸಿದರು.