ಕಲಬುರಗಿ: ''ನಾನು ಸತ್ತರೆ ನನ್ನ ಮಣ್ಣಿಗೆ ನೀವು ಬರಬೇಕು. ನನ್ನನ್ನು ಸುಟ್ಟರೇ ಮೇಣದ ಬತ್ತಿ ಹಚ್ಚಲು ಬನ್ನಿ. ಹೂಳಿದರೆ ಮಣ್ಣು ಹಾಕಲು ಬನ್ನಿ. ಇದಕ್ಕಿಂತ ಹೆಚ್ಚಿಗೆ ನಾನು ಹೇಳುವುದಿಲ್ಲ'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ತವರಿನ ಜನತೆಯ ಎದುರು ಭಾವುಕರಾಗಿ ನುಡಿದರು. ಅಫಜಲಪುರದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಲೋಕಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ಖರ್ಗೆ ಮತಯಾಚಿಸಿದರು.
ಬೃಹತ್ ಪ್ರಚಾರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಇತರ ನಾಯಕರು ಪಾಲ್ಗೊಂಡಿದ್ದರು. ''ನಾನು ಅಫಜಲಪುರದಿಂದಲೇ ಸೋತಿದ್ದೇನೆ ಎಂದು ಹೇಳಲಾರೆ. ಯಾಕೆಂದರೆ ನನ್ನ ಸೋಲಿಸಲು ಇಡೀ ದೇಶವೇ ಒಗ್ಗಟ್ಟಾಗಿತ್ತು. ಶಾ, ಆರ್ಎಸ್ಎಸ್, ಸೂಲಿಬೆಲೆ ಸೇರಿದಂತೆ ಎಲ್ಲರೂ ಇಲ್ಲೇ ಕ್ಯಾಂಪ್ ಮಾಡಿ ನನ್ನನ್ನು ಟಾರ್ಗೆಟ್ ಮಾಡಿದ್ದರು. ಆದರೂ ಕಲಬುರಗಿ ಜನ ನನ್ನ ಕೈಬಿಡಲ್ಲ ಎಂದು ಭಾವಿಸಿದ್ದೆ, ಆದರೆ ಸೋಲಾಯಿತು. ಈಗಲೂ ಕೂಡಾ ಮೋದಿ ಅಲ್ಲಿ, ಇಲ್ಲಿ ಹೇಳಿಕೊಳ್ಳುತ್ತಿದ್ದಾರೆ'' ಎಂದು ಖರ್ಗೆ ತಿಳಿಸಿದರು.
ಆರ್ಎಸ್ಎಸ್ ಸಿದ್ಧಾಂತ ಸೋಲಿಸಲು ಹೋರಾಟ: ''ನಾನು ರಾಜಕೀಯದಿಂದ ಎಂದಿಗೂ ನಿವೃತ್ತನಾಗುವುದಿಲ್ಲ. ಈ ಚುನಾವಣೆಗೆ ನಿಲ್ಲುತ್ತೇನೋ ಬಿಡುತ್ತೇನೋ ಆ ಮಾತು ಬೇರೆ. ಆದರೆ ತುಳಿತಕ್ಕೆ ಒಳಗಾದ ಸಮಾಜದ ಪರವಾದ ಹೋರಾಟ ಮಾಡಲು ನಾನು ರಾಜಕೀಯದಲ್ಲಿ ಇರುತ್ತೇನೆ. ಆರ್ಎಸ್ಎಸ್ ಸಿದ್ಧಾಂತಗಳನ್ನು ಸೋಲಿಸಲು ನಾನು ಹೋರಾಡುತ್ತಲೇ ಇರುತ್ತೇನೆ. ನಾವು ಮಾಡಿದ ಕೆಲಸಕ್ಕೆ ನೀವು ಆಶೀರ್ವಾದ ಮಾಡಿ. ರಾಧಾಕೃಷ್ಣ ದೊಡ್ಮನಿ ಅವರನ್ನು ಗೆಲ್ಲಿಸಬೇಕು. ನೀವು ಹಾಗೆ ಮಾಡದಿದ್ದರೆ ನಿಮ್ಮ ಹೃದಯದಲ್ಲಿ ನಾನು ಇಲ್ಲ ಎಂದು ತಿಳಿದುಕೊಳ್ಳುತ್ತೇನೆ'' ಎಂದರು.
ಪ್ರಧಾನಿ ಮೋದಿ ವಿರುದ್ಧ ಗುಡುಗು: ''ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಾಂಗಲ್ಯ ಸೂತ್ರ ಕಿತ್ತುಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅವರಿಗೆ ನಾಚಿಕೆಯಾಗಬೇಕು. ಎಂತಹ ಪ್ರಧಾನಿ ಇವರು. ಕಾಂಗ್ರೆಸ್ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆಯೇ ಹೊರತು, ಮಾಂಗಲ್ಯ ಸೂತ್ರ ಕಿತ್ತುಕೊಳ್ಳುವ ಕೆಲಸ ಮಾಡಿಲ್ಲ'' ಎಂದು ಖರ್ಗೆ ವಾಗ್ದಾಳಿ ನಡೆಸಿದರು.
''ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಯುವಕರಿಗೆ, ಮಹಿಳೆಯರಿಗೆ ರೈತರಿಗೆ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ ಯೋಜನೆಗಳ ಬಗ್ಗೆ ಹೇಳಿದ್ದೇವೆ. ಆದರೆ, ನಮ್ಮ ಪ್ರಣಾಳಿಕೆಯನ್ನು ಮುಸ್ಲಿಂ ಲೀಗ್ ಸಿದ್ಧಾಂತ ಇದ್ದಂತೆ ಇದೆ ಎಂದು ಮೋದಿ ಟೀಕಿಸಿದ್ದಾರೆ. ಯಾರೂ ಇಂತಹ ಮಾತು ಅಡುವುದಿಲ್ಲ. ಆದರೆ ಮೋದಿಗೆ ಏನಾಗಿದೆಯೋ ನನಗೆ ಗೊತ್ತಿಲ್ಲ. ನಮ್ಮ ಪ್ರಣಾಳಿಕೆಯ ಬಗ್ಗೆ ಚರ್ಚೆಗೆ ಬರುವಂತೆ ಪತ್ರ ಬರೆದಿದ್ದೇನೆ. ನೋಡೋಣ ಅವರು ಬಂದರೆ ನಾನು ಚರ್ಚೆ ಮಾಡುತ್ತೇನೆ'' ಎಂದು ಖರ್ಗೆ ಹೇಳಿದರು.
''ಮೋದಿ ಈ ದೇಶದ ಜನರ ಪರವಾಗಿಲ್ಲ. ಅವರು ಹಾಗೂ ಅಮಿತ್ ಶಾ ದೇಶವನ್ನು ಮಾರುವವರಿದ್ದರೆ, ಈ ದೇಶವನ್ನು ಅಂಬಾನಿ ಹಾಗೂ ಅದಾನಿ ಕೊಳ್ಳುವವರಿದ್ದಾರೆ ಎಂದು ಟೀಕಿಸಿದ ಖರ್ಗೆ, ದುರ್ದೈವದಿಂದಾಗಿ ಕಳೆದ ಸಲ ನನಗೆ ಹಿನ್ನೆಡೆಯಾಯಿತು. ಇದರಿಂದ ತಾಪತ್ರಯ ಆಗಿತ್ತು. ಆದದ್ದು ಆಗಿ ಹೋಗಿದೆ. ಅದನ್ನೇ ಪದೇ ಪದೇ ಹೇಳಿದರೆ ಚೆನ್ನಾಗಿರುವುದಿಲ್ಲ. ಕಳೆದ ಸಲದ ಸೋಲಿನಿಂದ ಹೊರಗೆ ಬನ್ನಿ. ಆದದ್ದೂ ಆಯ್ತು, ಈ ಸಲ ನೀವೆಲ್ಲ ಸೇರಿ ಬಿಜೆಪಿಗೆ ಮುಖಭಂಗ ಮಾಡಿ. ಇದು ಮೋದಿಗೂ ಗೊತ್ತಾಗಲಿ'' ಎಂದು ಜನರಿಗೆ ಖರ್ಗೆ ಕರೆ ನೀಡಿದರು.
''ನಾನು ಅಧಿಕಾರದಲ್ಲಿ ಇದ್ದಾಗ ಬ್ಯಾರೇಜ್, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೇಲ್ವೆ ಕೋಚ್ ಫ್ಯಾಕ್ಟರಿ, ಕೇಂದ್ರಿಯ ವಿವಿಗಳನ್ನು ಸ್ಥಾಪಿಸಿದ್ದೇನೆ. ಇದನ್ನು ಯಾರೂ ನನಗೆ ಹೇಳಿರಲಿಲ್ಲ. ಆದರೆ ಈ ಭಾಗದ ಅಭಿವೃದ್ಧಿಗಾಗಿ ನಾನು ಮಾಡಿದ್ದೇನೆ. ಕಲಬುರಗಿಯಿಂದ ಬೆಂಗಳೂರಿಗೆ ಚತುಷ್ಪಥ ರಸ್ತೆ ನಿರ್ಮಾಣವಾಗಬೇಕು. ಸಿಎಂ ಸಿದ್ದರಾಮಯ್ಯ ಅದನ್ನು ಮಾಡುತ್ತಾರೆ ಎಂಬ ಭರವಸೆ ಇದೆ. ಮೆಜಾರಿಟಿ ಇಲ್ಲದಿದ್ದರೂ ಕೂಡಾ ಆರ್ಟಿಕಲ್ 371 J ಜಾರಿಗೆ ತಂದಿದ್ದೇವೆ. ಇದರಿಂದಾಗಿ ಸಾವಿರಾರು ನಿರುದ್ಯೋಗಿಗಳು ನೌಕರಿ ಪಡೆದುಕೊಂಡಿದ್ದಾರೆ'' ಎಂದು ಎಐಸಿಸಿ ಅಧ್ಯಕ್ಷರು ಹೇಳಿದರು.
ಓದಿ: ಕಾಂಗ್ರೆಸ್ ಬೆಂಬಲಿಸುವಂತೆ ರಾಜ್ಯ ಒಕ್ಕಲಿಗರ ಸಮುದಾಯಗಳ ನಾಯಕರಿಂದ ಕರೆ - Okkaliga Association Leaders