ಯಾದಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸುರಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮತ್ತು ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಇದಕ್ಕೂ ಮುನ್ನ ವಿಶೇಷ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ ಸಿದ್ದರಾಮಯ್ಯ ಸುರಪುರಕ್ಕೆ ಬಂದಿಳಿದರು.
ಪೊಲೀಸ್ ಸಿಬ್ಬಂದಿ ರಾಷ್ಟ್ರಗೀತೆ ನುಡಿಸಿ, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು. ಬಳಿಕ ಎರಡು ನಿಮಿಷ ಮೌನ ಆಚರಣೆ ನಡೆಯಿತು.
ಸಚಿವರಾದ ಶರಣಬಸಪ್ಪ ದರ್ಶನಾಪೂರ, ಪ್ರಿಯಾಂಕ್ ಖರ್ಗೆ, ನಾಗೇಂದ್ರ, ಸತೀಶ್ ಜಾರಕಿಹೊಳಿ, ರಾಯಚೂರ ಸಂಸದ ರಾಜಾ ಅಮರೇಶ್ವರ ನಾಯಕ, ಅಮರೇಶ ಬಯ್ಯಾಪುರ, ರಾಜಾ ಕೃಷ್ಣಪ್ಪ ನಾಯಕ, ವಾಲ್ಮೀಕಿ ಶ್ರೀ, ಮಹಲ್ ರೋಜದ ಮಲ್ಲಿಕಾರ್ಜುನ ಮುತ್ಯಾ, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಐಜಿ ಅಜಯ್ ಹಿಲೋರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ, ಯಾದಗಿರಿ ಎಸ್ಪಿ ಸಂಗೀತಾ ಜಿ. ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಗಣ್ಯರ ಸಂತಾಪ: "ರಾಜಾ ವೆಂಕಟಪ್ಪ ನಾಯಕರ ನಿಧನ ಅತೀವ ನೋವುಂಟು ಮಾಡಿದೆ. ಅವರು ಜನಸಂಪರ್ಕಕ್ಕೆ ನೇರವಾಗಿ ಸ್ಪಂದಿಸುವ ಗುಣ ಹೊಂದಿದ್ದರು. ಅವರ ಅಗಲಿಕೆಯಿಂದಾದ ನಷ್ಟ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ" ಎಂದು ಶರಣಬಸಪ್ಪಗೌಡ ದರ್ಶನಾಪೂರ ಸಂತಾಪ ಸೂಚಿಸಿದರು.
"ರಾಜಾ ವೆಂಕಟಪ್ಪ ನಾಯಕ ಅವರ ಹಠಾತ್ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಮನೆಯ ಯಜಮಾನನ್ನು ಕಳೆದುಕೊಂಡು ದುಃಖದಲ್ಲಿರುವ ನಾಯಕ ಅವರ ಕುಟುಂಬದವರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ" ಎಂದು ಡಾ.ಶರಣಪ್ರಕಾಶ್ ಪಾಟೀಲ್ ಸಂತಾಪ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಕಲ ಸರ್ಕಾರಿ ಗೌರವದೊಂದಿಗೆ ಇಂದು ರಾಜಾ ವೆಂಕಟಪ್ಪ ನಾಯಕ ಅಂತ್ಯಸಂಸ್ಕಾರ: ಸರ್ಕಾರದ ಆದೇಶ