ಹುಬ್ಬಳ್ಳಿ: ಕಾಂಗ್ರೆಸ್ಸಿನವರು ಎಂದಿಗೂ ಕೂಡ ತಮ್ಮ ತಪ್ಪನ್ನು ತಾವು ಒಪ್ಪಿಕೊಳ್ಳುವುದಿಲ್ಲ. ಅವರ 60 ವರ್ಷದ ಸರ್ಕಾರದ ರೂಪುರೇಷೆಗಳನ್ನು ನೋಡಿದರೆ ನಿಜಕ್ಕೂ ನಮಗೆ ಒಂದು ತರಹ ನಗು ಬರುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಐಟಿ ಅಧಿಕಾರಿಗಳು ನೋಟಿಸ್ ಕೊಡದೇ ಏನ್ ಮಾಡುತ್ತಾರೆ. 2016 ಹಾಗೂ 2019 ರಲ್ಲಿ ದೊಡ್ಡ ಮಟ್ಟದ ಕ್ಯಾಶ್ ತೆಗೆದುಕೊಂಡಿದ್ದಾರೆ. ಹೀಗಾಗಿ ಕಾನೂನು ಪ್ರಕಾರ ಐಟಿ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಐಟಿ ನೋಟಿಸ್ ಕೊಟ್ಟು ತನಿಖೆಗೆ ಮುಂದಾಗಿದ್ದರೆ ಇದನ್ನು ಕಾಂಗ್ರೆಸ್ ಪಕ್ಷ ರಾಜಕೀಯ ದುರುದ್ದೇಶ ಎಂದು ಟೀಕೆ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ. ಅರವತ್ತು ವರ್ಷಗಳ ರಾಜಕೀಯ ಅನುಭವದಲ್ಲಿ ಏನು ಮಾಡಿದ್ದಾರೆ. ತಮ್ಮ ತಪ್ಪನ್ನು ಒಪ್ಪಿಕೊಳ್ಳದ ಮನಸ್ಥಿತಿಗೆ ಕಾಂಗ್ರೆಸ್ ಬಂದು ತಲುಪಿದೆ ಎಂದು ಜೋಶಿ ಲೇವಡಿ ಮಾಡಿದರು.
ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ಕುರಿತು ಮಾಧ್ಯಮದ ಪ್ರಶ್ನೆಗೆ ಯಾವುದಕ್ಕೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.