ಬೆಂಗಳೂರು: ಲೋಕಸಭಾ ಚುನಾವಣೆ ಜೊತೆಗೆ ಕರ್ನಾಟಕದ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ನಾಯಕ ದಿವಂಗತ ರಾಜಾ ವೆಂಕಟಪ್ಪ ನಾಯಕ್ ಅವರ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ 18,320 ಮತಗಳಿಂದ ಜಯ ದಾಖಲಿಸಿದ್ದಾರೆ.
2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸುರಪುರ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ರಾಜಾ ವೆಂಕಟಪ್ಪ ನಾಯಕ್ ಗೆಲುವು ಸಾಧಿಸಿದ್ದರು. ಆದರೆ, ಫೆಬ್ರವರಿ 24ರಂದು ಅವರು ಅಕಾಲಿಕ ನಿಧನ ಹೊಂದಿದ್ದರು. ಇದರಿಂದಾಗಿ ತೆರವಾಗಿದ್ದ ಸುರಪುರ ಕ್ಷೇತ್ರಕ್ಕೆ ಚುನಾವಣಾ ಆಯೋಗವು ಉಪ ಚುನಾವಣೆ ಘೋಷಿಸಿತ್ತು.
ಕಾಂಗ್ರೆಸ್ ರಾಜಾ ವೆಂಕಟಪ್ಪ ನಾಯಕ್ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ್ ಅವರನ್ನೇ ಕಣಕ್ಕೆ ಇಳಿಸಿತ್ತು. ಮತ್ತೊಂದೆಡೆ, ಬಿಜೆಪಿಯಿಂದ ಮಾಜಿ ಸಚಿವ ನರಸಿಂಹ ನಾಯಕ (ರಾಜು ಗೌಡ) ಸ್ಪರ್ಧಿಸಿದ್ದರು. ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದಂದು, ಮೇ 7ರಂದು ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು.
ಇಂದು ಮತ ಎಣಿಕೆ ನಡೆದಿದ್ದು, ಕಾಂಗ್ರೆಸ್ನ ರಾಜಾ ವೇಣುಗೋಪಾಲ 1,14,886 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಸಮೀಪದ ಪ್ರತಿಸ್ಪರ್ಧಿ ರಾಜು ಗೌಡ 96,566 ಮತ ಪಡೆದು 18,320 ಮತಗಳಿಂದ ಪರಾಭವಗೊಂಡಿದ್ದಾರೆ. ದೇಶಾದ್ಯಂತ 12 ರಾಜ್ಯಗಳ 25 ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆದಿದೆ.
ಇದನ್ನೂ ಓದಿ: ಬೀದರ್ ಲೋಕಸಭಾ ಕ್ಷೇತ್ರ: ದೇಶದ ಅತಿ ಕಿರಿಯ ಅಭ್ಯರ್ಥಿ ಕಾಂಗ್ರೆಸ್ನ ಸಾಗರ್ ಖಂಡ್ರೆ ಮುನ್ನಡೆ