ರಾಯಚೂರು: ದೇಶದಲ್ಲಿ ಒಂದು ಪಕ್ಷವು ಸಂವಿಧಾನವನ್ನು ಬದಲಿಸಲು ಪ್ರಯತ್ನ ಮಾಡುತ್ತಿದ್ದರೆ, ನಾವು ಅದನ್ನು ಉಳಿಸಲು ಹೋರಾಡುತ್ತಿದ್ದೇವೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಅಭ್ಯರ್ಥಿಯ ಪರ ಅವರು ಮತಯಾಚನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದರು.
ನಗರದಲ್ಲಿ ಗುರುವಾರ ಕಾಂಗ್ರೆಸ್ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಿದೆ. ಸಂವಿಧಾನ ಜಾರಿಗೆ ಮೊದಲು ಹಿಂದುಳಿದವರಿಗೆ, ದಲಿತರಿಗೆ ಯಾವುದೇ ಹಕ್ಕು ಇರಲಿಲ್ಲ. ಮತದಾನದ ಹಕ್ಕನ್ನು ಸಂವಿಧಾನ ಕೊಟ್ಟಿದೆ. ಅಂತಹ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.
ದೇಶದಲ್ಲಿರುವ ಎಲ್ಲರೂ ಸಮಾನರು ಎಂಬುದು ಸಂವಿಧಾನದ ಆಶಯ. ಅದರೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಇದರ ವಿರುದ್ಧ ಇದ್ದಾರೆ. ಸಮಾನತೆಗಾಗಿ ಹೋರಾಟ ಮಾಡಿದರೆ ಅವರನ್ನು ಆತಂಕವಾದಿಗಳು, ಭಯೋತ್ಪಾದಕರು ಎಂದಿದ್ದಾರೆ. ದಲಿತರಿಗೆ, ಆದಿವಾಸಿಗಳಿಗೆ ಸಮಾನತೆ, ಅಧಿಕಾರ ಸಿಗಬಾರದು ಅನ್ನೋದು ನಡ್ಡಾ ಅವರ ಉದ್ದೇಶ. ನಡ್ಡಾ ಹೇಳಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಈವರೆಗೂ ಮಾತನಾಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಉಚಿತ ಯೋಜನೆಗಳಿಗೆ ಬಹುಪರಾಕ್: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ, ಗೃಹ ಜ್ಯೋತಿ, ಅನ್ನಭಾಗ್ಯ, ಯುವನಿಧಿ, ಶಕ್ತಿಯೋಜನೆ ಅನುಷ್ಠಾನ ಮಾಡಿ ಕೊಟ್ಟ ಮಾತನ್ನು ಈಡೇರಿಸಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗಾಗಿ ಕ್ರಾಂತಿಕಾರಿ ಯೋಜನೆ ರೂಪಿಸಲಿದೆ. ಭಾರತದ ಎಲ್ಲಾ ಬಡ ಕುಟುಂಬಗಳ ಪಟ್ಟಿ ಮಾಡಿದ್ದೇವೆ. ನೋಟ್ ಬ್ಯಾನ್, ಜಿಎಸ್ಟಿಯಿಂದ ಸಾಮಾನ್ಯರ ಬದುಕು ಹಾಳಾಗಿದೆ ಎಂದು ದೂರಿದರು.
ಎನ್ಡಿಎ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಲೈಂಗಿನ ದೌರ್ಜನ್ಯ ಎಸಗಿದ್ದಾರೆ. 400 ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿದ್ದಾರೆ. ಇದು ವಿಶ್ವದಲ್ಲೇ ಅತಿದೊಡ್ಡ ದೌರ್ಜನ್ಯ ಪ್ರಕರಣವಾಗಿದೆ. ಈ ಬಗ್ಗೆ ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೈಕಮಾಂಡ್ಗೆ ಬರೆದ ಪತ್ರವೊಂದನ್ನು ತೋರಿಸಿದರು.
ಪ್ರಧಾನ ಮಂತ್ರಿ ಮೋದಿ ಅವರು ಇಂತಹ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಿದ್ದಾರೆ. ಅಮಿತ್ ಶಾ, ಮೋದಿಗೆ ಈ ಬಗ್ಗೆ ಮಾಹಿತಿ ಇದೆ. ಇಂತಹ ವ್ಯಕ್ತಿಯನ್ನು ಯಾಕೆ ರಕ್ಷಣೆ ಮಾಡುತ್ತಿದ್ದಾರೆ. ಮೋದಿ ಪ್ರತಿ ಹೆಣ್ಣುಮಕ್ಕಳಿಗೆ ಈ ಮೂಲಕ ಅವಮಾನ ಮಾಡಿದ್ದಾರೆ. ಆರೋಪಿಯನ್ನು ವಿದೇಶಕ್ಕೆ ಹೋಗಲು ಏಕೆ ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಹೆಚ್.ಡಿ.ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಎಸ್ಐಟಿಗೆ ಕೋರ್ಟ್ ನೋಟಿಸ್ - HASSAN PEN DRIVE CASE