ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ 23ನೇ ಮೇಯರ್ ಆಗಿ ಕಾಂಗ್ರೆಸ್‌ನ ಮುಲ್ಲಂಗಿ ನಂದೀಶ್ ಆಯ್ಕೆಯಾಗಿದ್ದಾರೆ. ಇವರು ಪಾಲಿಕೆಯ 18ನೇ ವಾರ್ಡ್ ಸದಸ್ಯ ಹಾಗೂ ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತ. ಬಿಜೆಪಿ ಮೇಯರ್ ಅಭ್ಯರ್ಥಿ ಶ್ರೀನಿವಾಸ್ ಮೋತ್ಕರ್ ವಿರುದ್ಧ ಮುಲ್ಲಂಗಿ ನಂದೀಶ್ ಗೆಲುವು ಸಾಧಿಸಿದ್ದು, ಈ ಮೂಲಕ ಮೇಯರ್ ಚುನಾವಣೆಯಲ್ಲಿ ಬಿ.ನಾಗೇಂದ್ರ ಮೇಲುಗೈ ಸಾಧಿಸಿದ್ದಾರೆ.
ಉಪ ಮೇಯರ್ ಆಗಿ ಕಾಂಗ್ರೆಸ್‌ನ ಡಿ.ಸುಕುಂ ಆಯ್ಕೆಯಾದರು. ಬಿಜೆಪಿಯಿಂದ ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಸುಕುಂ ಅವಿರೋಧವಾಗಿ ಆಯ್ಕೆಯಾದರು. ಮೇಯರ್ ಸ್ಥಾನವನ್ನು ತಮ್ಮ ಬೆಂಬಲಿಗರಿಗೆ ಕೊಡಿಸಲು ಬಿ.ನಾಗೇಂದ್ರ ಹಾಗೂ ಶಾಸಕ ಭರತ್ ರೆಡ್ಡಿ ನಡುವೆ ಪೈಪೋಟಿ ಇತ್ತು. ಹೈಕಮಾಂಡ್ ಮಧ್ಯಸ್ಥಿಕೆಯಿಂದ ನಂದೀಶ್‌ಗೆ ಮೇಯರ್ ಸ್ಥಾನ ಒಲಿದಿದೆ.
ನನ್ನ, ಭರತ್ ರೆಡ್ಡಿ ನಡುವೆ ಭಿನ್ನಾಭಿಪ್ರಾಯವಿಲ್ಲ: ಮೇಯರ್ ಆಯ್ಕೆ ಬಳಿಕ ನಾಗೇಂದ್ರ ಮಾತನಾಡಿ, "ನನ್ನ ಹಾಗೂ ಶಾಸಕ ಭರತ್ ರೆಡ್ಡಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಭರತ್ ರೆಡ್ಡಿ, ನಾನು ಸಹೋದರಂತೆ ಒಟ್ಟಿಗಿದ್ದೇವೆ. ನಮ್ಮ ನಡುವೆ ಒಡಕಿದೆ ಅನ್ನೋದು ಮಾಧ್ಯಮಗಳ ಸೃಷ್ಟಿ. ಕಾಂಗ್ರೆಸ್ ಪಾಲಿಕೆ ಸದಸ್ಯರಲ್ಲಿ ಮೇಯರ್ ಆಕಾಂಕ್ಷಿಗಳು ಹೆಚ್ಚಾಗಿದ್ದರು. ಹೀಗಾಗಿ ನಾಲ್ವರು ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಹೈಕಮಾಂಡ್ ನಿರ್ಧಾರದಂತೆ ಮೇಯರ್ ಆಯ್ಕೆ ನಡೆದಿದೆ. ಬಿಜೆಪಿ ವಿರುದ್ಧ 16 ಮತಗಳ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ" ಎಂದರು.
ನೂತನ ಮೇಯರ್ ನಂದೀಶ್ ಮಾತನಾಡಿ, "ಬಳ್ಳಾರಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ. ಇಷ್ಟು ದಿನ ಆಗಿರೋದು ಬೇರೆ, ಇನ್ಮುಂದೆ ಆಗುವ ಅಭಿವೃದ್ಧಿ ನೋಡಿ. ಬಳ್ಳಾರಿ ಜಿಲ್ಲೆ ಮತ್ತು ಬಳ್ಳಾರಿ ನಗರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ. ಹೀಗಾಗಿ ಹೆಚ್ಚೆಚ್ಚು ಅಭಿವೃದ್ಧಿ ಮಾಡುತ್ತೇವೆ" ಎಂದು ಹೇಳಿದರು.