ಚಿಕ್ಕೋಡಿ (ಬೆಳಗಾವಿ): ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಹಲವು ಕುತೂಹಲಕಾರಿ ಚರ್ಚೆಗಳಿಗೆ ಕಾರಣವಾಗುತ್ತಿದೆ. ಪ್ರಮುಖವಾಗಿ ಸಿಎಂ ಸ್ಥಾನಕ್ಕೆ ಬೇರೆಯವರನ್ನು ತರಬೇಕು ಹಾಗೂ ಡಿಸಿಎಂ ಸ್ಥಾನಗಳನ್ನು ಇನ್ನಷ್ಟು ವಿಸ್ತರಣೆ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಗುರುವಾರ ನಡೆದ ಕೆಂಪೇಗೌಡ ಜಯಂತಿ ಸಮಾರಂಭದ ವೇದಿಕೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಚಂದ್ರಶೇಖರ್ ಸ್ವಾಮೀಜಿ ಕೇಳಿಕೊಂಡಿದ್ದರು. ಈ ಬೆನ್ನಲ್ಲೇ ಲಿಂಗಾಯತರಿಗೂ ಸಿಎಂ ಸ್ಥಾನ ನೀಡಬೇಕೆಂಬ ಒತ್ತಾಯಗಳು ಕೇಳಿ ಬರಲಾರಂಭಿಸಿವೆ.
ವಿರಶೈವ ಲಿಂಗಾಯತರ ಕೊಡುಗೆ ಅಪಾರವಾಗಿ ಇರುವುದರಿಂದ ಲಿಂಗಾಯತ ನಾಯಕರನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕಡೆಗಣಿಸಬಾರದು ಎಂದು ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾಕ್ಟರ್ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ತಾಲೂಕಿನ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಲಿಂಗಾಯತ ಮತದಾರರು ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟು ಹೆಚ್ಚಿನ ಮತಗಳು ನೀಡಿ ಅಧಿಕಾರಕ್ಕೆ ತಂದಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬೇರೆಯವರನ್ನು ತರಬೇಕು ಮತ್ತು ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಹೆಚ್ಚಿಗೆ ಮಾಡಬೇಕು ಎಂದು ಚರ್ಚೆ ನಡೆಯುತ್ತಿದೆ. ಏನಾದರೂ ಬದಲಾವಣೆ ಮಾಡಿದರೆ ವೀರಶೈವ ಲಿಂಗಾಯತ ಸಮುದಾಯದ ನಾಯಕರನ್ನು ಕಡೆಗಣಿಸಬಾರದು ಎಂದು ಹೇಳಿದರು.
ನಮ್ಮ ಸಮುದಾಯದಲ್ಲಿ ಹಲವು ನಾಯಕರು ಈಗಾಗಲೇ ಸಚಿವ ಸಂಪುಟದಲ್ಲಿ ಇದ್ದಾರೆ. ಎಂ.ಬಿ ಪಾಟೀಲ್, ಈಶ್ವರ್ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ, ಸಮಾಜದ ಹಿರಿಯರಾದ ಶಾಮನೂರು ಶಿವಶಂಕರಪ್ಪ ಇಂತಹವರಿಗೆ ಅವಕಾಶ ನೀಡಬೇಕು. ಈ ಕುರಿತು ಕಾಶಿ, ಉಜ್ಜಯಿನಿ, ಜಗದ್ಗುರುಗಳ ಜೊತೆಗೂ ಚರ್ಚೆ ಮಾಡಲಾಗಿದೆ. ವೀರಶೈವ ಲಿಂಗಾಯತ ಸಚಿವರಿಗೆ ಹೆಚ್ಚಿನ ಸ್ಥಾನ ಮಾನ ಕೊಡಬೇಕು. ಹಿರಿಯರಿಗೆ ಹೆಚ್ಚಿನ ಜವಾಬ್ದಾರಿ ನೀಡಿದರೆ ವೀರಶೈವ ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಟ್ಟಂತಾಗುತ್ತದೆ ಎಂದು ಶ್ರೀಗಳು ಹೇಳಿದರು.
ಯಾವುದೇ ಪಕ್ಷದಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದರೆ ಒಳ್ಳೆಯ ಬೆಳೆವಣಿಗೆ ಆಗುವುದಿಲ್ಲ. ಈ ಹಿಂದೆ ಕೂಡ ಅದರ ಪರಿಣಾಮವನ್ನು ಅನುಭವಿಸಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಯಾರಿಗೆ ಎಷ್ಟು ವರ್ಷ ಸಿಎಂ ಸ್ಥಾನ ಎಂಬುದ ಕುರಿತು ಒಡಂಬಡಿಕೆ ಆಗಿರುವರು ನಮಗೆ ಮಾಹಿತಿ ಇಲ್ಲ. ಏನಾದರೂ ಆ ರೀತಿ ಮಾತುಕತೆ ಆಗಿದ್ರೆ ಅದೇ ರೀತಿಯಲ್ಲಿ ಸಾಗುವುದು ಒಳ್ಳೆಯದೆಂದು ಶ್ರೀಗಳು ಅಭಿಪ್ರಾಯಪಟ್ಟರು.
ಓದಿ: 'ನನ್ನ ಕುಟುಂಬದ ಯಾವುದೇ ಸದಸ್ಯರು ಚುನಾವಣಾ ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ': ಡಿಕೆಶಿ - DK Shivakumar