ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಅಮಾನುಷ ಕೃತ್ಯವಾಗಿದ್ದು, ಕಾಂಗ್ರೆಸ್ ಸರ್ಕಾರ ಜನತೆಯ ಬದುಕಿನ ಗ್ಯಾರಂಟಿ ಕಸಿದುಕೊಂಡಿದೆ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಕಿಡಿಕಾರಿದರು.
ನಗರದ ಅರವಿಂದ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಅಮಾನುಷ ಘಟನೆಯು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣದ ನೀತಿಯಿಂದಾಗಿ ನಡೆದಿದೆ. ಕಾಂಗ್ರೆಸ್ ನಾಯಕರಿಂದ ಖಂಡನೆ ವ್ಯಕ್ತವಾಗಿಲ್ಲ. ಹಿರೇಮಠ ಕುಟುಂಬಕ್ಕೆ ಸಿಎಂ ಅಥವಾ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸವನ್ನು ಇನ್ನೂ ಮಾಡಿಲ್ಲ ಎಂದು ಆರೋಪಿಸಿದರು.
''ಹಿಂದುಗಳಿಗೆ ಹಾಗೂ ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ಬದುಕಿನ ಗ್ಯಾರಂಟಿ ಕೊಡದೆ, ಕೊಲೆ ಮಾಡಿದ ಆರೋಪಿಗೆ ಬದುಕಿನ ಗ್ಯಾರಂಟಿ ಕೊಡುವ ಮೂಲಕ ಮತಾಂಧ ನೀತಿಯನ್ನು ಅನುಸರಿಸುತ್ತಿದೆ. ರಾಜ್ಯದಲ್ಲಿ ಲವ್ ಜಿಹಾದ್ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದರಿಂದಾಗಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ'' ಎಂದು ಗಂಭೀರವಾಗಿ ಆರೋಪಿಸಿದರು.
''ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಎಂದರೆ ಹೆಣ್ಣು ಮಕ್ಕಳ ಜೀವಕ್ಕೆ ರಕ್ಷಣೆ ಇಲ್ಲದಿರುವುದು, ರೈತರು, ಹಿಂದುಗಳಿಗೆ ಹಾಗೂ ದಲಿತರ ಹಕ್ಕುಗಳಿಗೆ ಗ್ಯಾರಂಟಿ ಇಲ್ಲದಿರುವ ಗ್ಯಾರಂಟಿ ಎಂದ ಅವರು, ಅಲ್ಪಸಂಖ್ಯಾತರಿಗೆ ಗ್ಯಾರಂಟಿ, ಲವ್ ಜಿಹಾದ್ ಗ್ಯಾರಂಟಿ, ಗಲಭೆ ಕೋರರಿಗೆ ಗಲಭೆ ಪ್ರಕರಣ ಗ್ಯಾರಂಟಿ, ವಿದ್ಯುತ್, ಸಾರಾಯಿ ತೆರಿಗೆ ಹೆಚ್ಚಳ ಮಾಡುವ ಕೆಲಸವೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ'' ಎಂದು ಕಟುವಾಗಿ ಟೀಕಿಸಿದರು.
ಅಲ್ಪಸಂಖ್ಯಾತರ ಓಲೈಕೆ: ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿ, ನೇಹಾ ಹತ್ಯೆ ನಡೆದ ಬಳಿಕ ಕೆಲ ಗಂಟೆಗಳಲ್ಲಿಯೇ ಪೊಲೀಸರು ಮೊಬೈಲ್ ವಶಕ್ಕೆ ಪಡೆದುಕೊಳ್ಳುತ್ತಾರೆ. ಆದರೆ ದುರ್ದೈವದ ಸಂಗತಿ ಅಂದರೆ ಮೊಬೈಲ್ನಲ್ಲಿನ ವಿಡಿಯೋಗಳು ಹೇಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು ಎಂಬುದರ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಹತ್ಯೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಆಕಸ್ಮಿಕ ಘಟನೆ ಎನ್ನುತ್ತಿದ್ದು, ಇದು ನಾಚಿಗೇಡಿನ ಸಂಗತಿ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನೇಹಾ ಹತ್ಯೆ ಪ್ರಕರಣವನ್ನು ಸರ್ಕಾರ ತಿರುಚುವ ಮೂಲಕ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತನ ಮಗಳಿಗೆ ಸುರಕ್ಷತೆ ವಿಲ್ಲವೆಂದರೆ ಸಾಮಾನ್ಯ ಜನರು ಬದುಕುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಈ ಕುರಿತು ತನಿಖೆ ನಡೆಸುವ ಮೂಲಕ ರಾಜ್ಯ ಸರ್ಕಾರ ತುಷ್ಟೀಕರಣ ಬಿಟ್ಟು ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ ಎಂದು ಒತ್ತಾಯಿಸಿದರು.