ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ತಮ್ಮ ಕುಟುಂಬ 97.33 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ.
ಚುನಾವಣಾಧಿಕಾರಿಗೆ ಇಂದು ಅವರು ಸಲ್ಲಿಕೆ ಮಾಡಿರುವ ಪ್ರಮಾಣಪತ್ರದಲ್ಲಿ ತಮ್ಮ ಆಸ್ತಿ ವಿವರ ಸಲ್ಲಿಸಿದ್ದು, ತಮ್ಮ ಬಳಿ 14.96 ಕೋಟಿ ರೂ. ಚರಾಸ್ತಿ ಹಾಗೂ ಪತ್ನಿ ಬಳಿ 10.48 ಕೋಟಿ ರೂ., ಮೊದಲ ಮಗನ ಬಳಿ 21.93 ಲಕ್ಷ ರೂ., ಎರಡನೇ ಮಗನ ಬಳಿ 21.38 ಲಕ್ಷ ರೂ. ಚರಾಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ.
ಚರಾಸ್ತಿ ಪೈಕಿ ತಮ್ಮ ಬಳಿ 4.50 ಲಕ್ಷ ರೂ. ನಗದು, ಪತ್ನಿ ಬಳಿ 4 ಲಕ್ಷ ರೂ. ನಗದು, ಮಕ್ಕಳ ಬಳಿ 1 ಲಕ್ಷ ಹಾಗೂ 50 ಸಾವಿರ ರೂ. ನಗದು ಇರುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಮನ್ಸೂರ್ ಅಲಿ ಖಾನ್ ಬಳಿ 2.25 ಕೆ.ಜಿ. ಚಿನ್ನ, ಪತ್ನಿ ಬಳಿ 3.71 ಕೆ.ಜಿ ಚಿನ್ನ ಸೇರಿ 3.65 ಕೋಟಿ ರೂ. ಮೌಲ್ಯದ 5.9 ಕೆ.ಜಿ. ಚಿನ್ನಾಭರಣ, ಪತ್ನಿ ಬಳಿ 1.09 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯೂ ಎಕ್ಸ್-7 ಕಾರು, ಮನ್ಸೂರ್ ಅಲಿ ಖಾನ್ ಬಳಿ 98 ಲಕ್ಷ ರೂ. ಮೌಲ್ಯದ ಆಡಿ ಎಸ್-5 ಕಾರು ಹೊಂದಿದ್ದಾರೆ.
ಸ್ಥಿರಾಸ್ತಿ: ಸ್ಥಿರಾಸ್ತಿ ಪೈಕಿ ಮನ್ಸೂರ್ ಅಲಿ ಖಾನ್ ಕೃಷಿ ಜಮೀನು, ಕೃಷಿಯೇತರ ಜಮೀನು, ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ಸಹಿತ 62.19 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇನ್ನು ಪತ್ನಿ 9.25 ಕೋಟಿ ರು. ಸ್ಥಿರಾಸ್ತಿ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.