ಸುಳ್ಯ/ದಕ್ಷಿಣ ಕನ್ನಡ: ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿಯ ಹೇಳಿಕೆ ಪಡೆಯಲು ಸುಳ್ಯ ಆಸ್ಪತ್ರೆಗೆ ಬಂದ ಕೇರಳದ ಮ್ಯಾಜಿಸ್ಟ್ರೇಟ್‌ಗೆ ಅಗೌರವ ತೋರಿರುವ ಆರೋಪದ ಹಿನ್ನೆಲೆ ಸ್ವತಃ ನ್ಯಾಯಾಧೀಶರೇ ಪೊಲೀಸರಿಗೆ ದೂರು ನೀಡಿದ ಘಟನೆ ಸುಳ್ಯದಲ್ಲಿ ನಡೆದಿದೆ.
ಕೇರಳದ ಕಾಸರಗೋಡಿನ ದೇಲಂಪಾಡಿಯ ಯುವತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿತ್ತು. ಆ ಯುವತಿಯ ಹೇಳಿಕೆ ಪಡೆಯಲು ಆದೂರು ಪೊಲೀಸ್ ಅಧಿಕಾರಿಗಳ ಜತೆ ತಾವು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದೆವು. ಈ ವೇಳೆ ಆಸ್ಪತ್ರೆಯ ಇಬ್ಬರು ವೈದ್ಯರು ತಮ್ಮೊಂದಿಗೆ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಮ್ಯಾಜಿಸ್ಟ್ರೇಟ್ ಸುಳ್ಯ ಪೊಲೀಸ್ ಠಾಣೆಯಲ್ಲಿ ವೈದ್ಯರ ವಿರುದ್ಧ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ? ದೂರಿನಲ್ಲಿ ಏನಿದೆ?: ಕೇರಳ ಹೈಕೋರ್ಟ್ ಆದೇಶದ ಪ್ರಕಾರ ಆತ್ಮಹತ್ಯೆಗೆ ಯತ್ನಿಸಿದವರ ಹೇಳಿಕೆಯನ್ನು ಸ್ವತಃ ಜಿಲ್ಲಾ ನ್ಯಾಯಾಧೀಶರೇ ಸ್ಥಳಕ್ಕೆ ಹೋಗಿ ಪಡೆಯಬೇಕಿರುವುದರಿಂದ ಮ್ಯಾಜಿಸ್ಟ್ರೇಟ್ ಅಬ್ದುಲ್ ಬಾತಿಷ್ ಅವರು ಸೆ.21ರಂದು ರಾತ್ರಿ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದರು.
ತಾವು ಆಸ್ಪತ್ರೆಗೆ ಬರುವ ಬಗ್ಗೆ ಈ ಮೊದಲೇ ಮಾಹಿತಿ ನೀಡಿದ್ದರೂ, ವೈದ್ಯರು ತನಗೆ ಮಾಹಿತಿ ನೀಡದೇ ಅಗೌರವದಿಂದ ನಡೆಸಿಕೊಂಡಿದ್ದಾರೆ ಎಂದು ಮ್ಯಾಜಿಸ್ಟ್ರೇಟ್ ಅಬ್ದುಲ್ ಬಾತಿಷ್ ಸುಳ್ಯ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಿಲ್ಲಾ ಆರೋಗ್ಯ ಅಧಿಕಾರಿಗಳು ಘಟನೆ ಬಗ್ಗೆ ನೀಡಿದ ಮಾಹಿತಿ ಇದು: ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ, ಕೇರಳದ ನ್ಯಾಯಾಧೀಶರು ಅದೂರು ಪೊಲೀಸರರೊಂದಿಗೆ ರಾತ್ರಿ ವೇಳೆಯಲ್ಲಿ ಆಸ್ಪತ್ರೆಗೆ ಆಗಮಿಸಿದ್ದಾರೆ. ನಂತರದಲ್ಲಿ ಅವರು ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ಸಮಯದಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಅದನ್ನು ಲಿಖಿತವಾಗಿ ನೀಡುವಂತೆ ಕೇಳಿದ್ದಾರೆ ಎಂಬುದಾಗಿ ತನಗೆ ಮಾಹಿತಿ ಲಭ್ಯವಾಗಿದೆ. ಆದರೆ, ಆಸ್ಪತ್ರೆಯಲ್ಲಿ ಈ ಸಮಯದಲ್ಲಿ ಏನು ನಡೆದಿದೆ ಎಂಬ ಕುರಿತಾದ ವರದಿ ನೀಡುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರಿಗೆ ತಿಳಿಸಲಾಗಿದೆ. ನ್ಯಾಯಾಧೀಶರು ಪೊಲೀಸರಿಗೆ ದೂರು ನೀಡಿರುವ ಬಗ್ಗೆ ನಮಗೂ ಯಾವುದೇ ಮಾಹಿತಿ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ದೂರಿನ ಬಗ್ಗೆ ಎಸ್‌ಪಿ ಪ್ರತಿಕ್ರಿಯೆ ಹೀಗಿದೆ: ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿರುವ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಯತೀಶ್, ಕೇರಳದ ನ್ಯಾಯಾಧೀಶರು ನೀಡಿರುವ ದೂರಿನನ್ವಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಭಾನುವಾರವೇ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಪಘಾತಕ್ಕೀಡಾದವರ ಆಪತ್ಬಾಂಧವ 'ಆಪತ್ಕಾಲಯಾನ ಸೇವೆ': ನೂತನ ಆಂಬ್ಯುಲೆನ್ಸ್ಗಳ ಸೇವೆ ಹೇಗಿರಲಿದೆ? - Apatkalayana Ambulance