ಹುಬ್ಬಳ್ಳಿ: ಗಣೇಶ ನಿಮಜ್ಜನ ಸಂದರ್ಭದಲ್ಲಿ ಮಂಟೂರು ರಸ್ತೆಯಲ್ಲಿ ವ್ಯಕ್ತಿಯೋರ್ವನಿಗೆ ಚಾಕು ಇರಿದಿದೆ ಎಂದು ಹರಿದಾಡುತ್ತಿದ್ದ ಸುದ್ದಿಗೆ ಪೊಲೀಸ್ ಕಮಿಷನರ್ ಸ್ಪಷ್ಟನೆ ನೀಡಿದ್ದಾರೆ.
ಹು-ಧಾ ಪೊಲೀಸ್ ಕಮಿಷನರ್ ಸ್ಪಷ್ಟನೆ ಹೀಗಿದೆ: "ನಗರದ ಮಂಟೂರು ರಸ್ತೆಯಲ್ಲಿ ಚೂರಿ ಇರಿತವಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಹಾಗಾಗಿ ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಕಾರ್ಪೊರೇಟರ್ ಸೇರಿದಂತೆ ಈ ಭಾಗದ ಸಾರ್ವಜನಿಕರನ್ನು ಮಾತನಾಡಿಸಿದ್ದೇನೆ. ಇಲ್ಲಿ ಅಬ್ರಹಾಂ ಅರಮಾಳ್ ಎಂಬ ಹುಡುಗ ಹಾಗೂ ವೆಂಕಟೇಶ್ ರೆಡ್ಡಿ ಇಬ್ಬರು ಪರಿಚಯಸ್ಥರು. ಅವರು ಅವರ ಮನೆಯ ಸುತ್ತಮುತ್ತಲಿನ ಏರಿಯಾದಲ್ಲಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡಿದ್ದಾರೆ. ಇದರಲ್ಲಿ ಅಬ್ರಾಹಂಗೆ ಸ್ವಲ್ಪ ಪೆಟ್ಟು ಬಿದ್ದಿದೆ. ಹಾಗಾಗಿ ಅವನು ಮನೆಗೆ ಹೋಗಿದ್ದನು. ಮನೆಯಲ್ಲಿ ರೆಸ್ಟ್ ಮಾಡಲು ಹೇಳಿದ್ದರು".
"ನಂತರ ಅವರ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ದೂರು ನೀಡಲು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇಷ್ಟು ಬಿಟ್ಟರೆ ಗಣೇಶನ ನಿಮಜ್ಜನ, ಡಿಜೆ ಸಂಬಂಧ ಅಥವಾ ಮೆರವಣಿಗೆ ವೇಳೆ 2 ಕೋಮಿನ ನಡುವೆ ಏನು ಆಗಿಲ್ಲ. ಈ ಬಗ್ಗೆ ಬಹಳ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಶರೀಫ್ ಈ ಭಾಗದ ಕಾರ್ಪೊರೇಟರ್, ಸುನಿಲ್, ಪ್ರದೀಪ್ ಅಂತ ಇದ್ದಾರೆ. ಇವರೆಲ್ಲ ಸ್ವಯಂ ಸೇವಕರು, ಈ ಭಾಗದಲ್ಲಿದ್ದ ಎಲ್ಲಾ ಗಣೇಶಗಳನ್ನು ಎಲ್ಲಾ ಜಾತಿ ಧರ್ಮದ ಮುಖಂಡರು, ಎಲ್ಲ ಪಕ್ಷದ ಮುಖಂಡರು ಮೇಲುಸ್ತುವಾರಿ ತೆಗೆದುಕೊಂಡು ಅಚ್ಚುಕಟ್ಟಾಗಿ ನಿಮಜ್ಜನ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮವರಿಗೂ ಸ್ಪಷ್ಟನೆ ನೀಡಿದ್ದೇನೆ. ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯಾರೂ ತಪ್ಪು ಮಾಹಿತಿ ಪಸರಿಸಬೇಡಿ" ಎಂದು ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಮಗನನ್ನು ಶಾಲೆಗೆ ಬಿಟ್ಟು ಬರುತ್ತಿದ್ದ ಗ್ರಾ.ಪಂ ಮಾಜಿ ಉಪಾಧ್ಯಕ್ಷನಿಗೆ ಗುಂಡಿಕ್ಕಿ ಕೊಲೆ - ALANDA MURDER