ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಕೊಂಚ ತಗ್ಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ಸಮುದ್ರದ ತೀರದಲ್ಲಿ ಅಲೆಗಳ ರೌದ್ರ ನರ್ತನ ಮುಂದುವರೆದಿದೆ. ಪರಿಣಾಮ, ಕಡಲ್ಕೊರೆತ ತಡೆಗೆ ಹಾಕಿದ ಕಲ್ಲುಗಳು ಸಮುದ್ರಪಾಲಾಗಿ ರಕ್ಕಸ ಅಲೆಗಳು ಮನೆಗಳನ್ನೇ ನುಂಗುವ ಭೀತಿ ಎದುರಾಗಿದೆ.
ಜಿಲ್ಲೆಯಲ್ಲಿ ಮಳೆ ಶುರುವಾದಾಗ ರೈತರು ಖುಷಿಪಡುತ್ತಾರೆ. ಆದರೆ ಮೀನುಗಾರರು ಮತ್ತು ಸಮುದ್ರ ತೀರದಲ್ಲಿ ನೆಲೆಸಿರುವ ಜನರು ಸಮುದ್ರ ಮುನಿಸಿಕೊಳ್ಳದಿರಲಿ ಎಂದು ಪ್ರಾರ್ಥಿಸಿ ಜೀವ ಅಂಗೈಯಲ್ಲಿ ಹಿಡಿದು ಜೀವನ ನಡೆಸಬೇಕಾದ ಸ್ಥಿತಿ ಇದೆ. ಕಾರವಾರದಿಂದ ಭಟ್ಕಳದವರೆಗೂ ಪ್ರತಿವರ್ಷ ಇದೇ ಆತಂಕ.
ಕಾರವಾರದ ದೇವಭಾಗ ಹಾಗೂ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿನ ಸಮುದ್ರ ದಡದಿಂದ ಸುಮಾರು 15ರಿಂದ 20 ಮೀ. ಕಡಲ ಕೊರೆತ ಉಂಟಾಗಿದೆ. ಸಮುದ್ರದ ಆರ್ಭಟಕ್ಕೆ ಈಗಾಗಲೇ ದಡದಂಚಿನಲ್ಲಿದ್ದ 15ಕ್ಕೂ ಅಧಿಕ ತೆಂಗಿನ ಮರಗಳಲ್ಲದೇ, ತಾತ್ಕಾಲಿಕವಾಗಿ ಅಡ್ಡ ಹಾಕಿದ ಕಲ್ಲುಗಳು ಕೂಡ ಕೊಚ್ಚಿಹೋಗುತ್ತಿವೆ.
ಕಳೆದ ಒಂದು ವಾರದಿಂದ ಕಡಲ್ಕೊರೆತ ಕಾಣಿಸಿಕೊಂಡಿದ್ದರೂ ತುರ್ತು ಪರಿಹಾರಕ್ಕೆ ಮುಂದಾಗದ ಆಡಳಿತ ವರ್ಗದ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ. ಮಳೆಗಾಲದಲ್ಲಿ ಯಾಂತ್ರಿಕ ಮೀನುಗಾರಿಕೆ ಸ್ಥಗಿತವಾಗಿರುವುದರಿಂದ ಬಲೆಗಳನ್ನು ಶೆಡ್‌ಗಳಲ್ಲಿ ಇರಿಸಲಾಗಿದೆ. ಆದರೆ ಈಗ ಶೆಡ್‌ಗಳು ಸಹ ಸಮುದ್ರ ಪಾಲಗುತ್ತಿದ್ದು, ಲಕ್ಷಾಂತರ ರೂ. ಮೌಲ್ಯದ ಬಲೆಗಳನ್ನು ಎಲ್ಲಿ ಸುರಕ್ಷಿತವಾಗಿ ಇರಿಸುವುದು ಎಂಬ ಚಿಂತೆ ಮೀನುಗಾರರನ್ನು ಕಾಡತೊಡಗಿದೆ.
"ಕಡಲ್ಕೊರೆತ ಸಮಸ್ಯೆಗೆ ಸ್ಪಂದಿಸಬೇಕು. ಶಾಶ್ವತವಾಗಿ ಪರಿಹಾರ ದೊರಕಿಸಿಕೊಡಬೇಕು. ಈಗ ತಕ್ಷಣಕ್ಕೆ ಆಗುವ ಹಾನಿಯನ್ನು ತಪ್ಪಿಸುವ ನಿಟ್ಟಿನಲ್ಲಿ ತುರ್ತು ಪರಿಹಾರಕ್ಕೆ ಕ್ರಮ ವಹಿಸಬೇಕು" ಎಂದು ಸ್ಥಳೀಯರಾದ ಸಂತೋಷ ದುರ್ಗೇಕರ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಜೋಯಿಡಾದಲ್ಲಿ ನಾಡಬಾಂಬ್ ಸ್ಫೋಟ: ತನಿಖೆ ಚುರುಕು - Bomb Blast In Joida