ಮಂಡ್ಯ: ಗಗನಚುಕ್ಕಿ ಜಲಪಾತೋತ್ಸವ ಅದ್ಧೂರಿಯಾಗಿ ಜರುಗಿದೆ. ರಾಜ್ಯದಲ್ಲಿ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರುತ್ತಿದ್ದೇವೆ. ಪ್ರವಾಸೋದ್ಯಮದ ಬೆಳವಣಿಗೆಗೆ ಅಗತ್ಯ ಹಣ ಕೊಡಲು ಸರ್ಕಾರ ಸಿದ್ಧವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಆಯೋಜಿಸಿದ್ದ "ಗಗನಚುಕ್ಕಿ ಜಲಪಾತೋತ್ಸವ -2024" ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಇಲ್ಲಿನ ಶಾಸಕರು ಕೇಳಿದಾಗೆಲ್ಲಾ ಅಗತ್ಯವಿದ್ದಷ್ಟು ಅನುದಾನ ನೀಡುತ್ತಲೇ ಇದ್ದೇವೆ. ರಾಜ್ಯದ ಜನರ ಆರ್ಥಿಕ ಪ್ರಗತಿ, ಸಾಮಾಜಿಕ ನ್ಯಾಯ ಮತ್ತು ನಾಡಿನ ಸಮಗ್ರ ಪ್ರಗತಿ ವಿಚಾರದಲ್ಲಿ ರಾಜಿಯೇ ಇಲ್ಲ. ರಾಜ್ಯದ ಎಲ್ಲಾ ಜಾತಿ, ವರ್ಗ, ಧರ್ಮದ ಜನರಿಗೆ ಆರ್ಥಿಕ ಶಕ್ತಿ ಕೊಡುವುದು ನಮ್ಮ ಗುರಿಯಾಗಿದೆ. ಐದೂ ಯೋಜನೆಗಳ ಲಾಭವನ್ನು ಎಲ್ಲಾ ಜಾತಿಯ ಬಡವರು ಮತ್ತು ಮಧ್ಯಮ ವರ್ಗದವರಿಗೆ ತಲುಪಿಸಿದ್ದೇವೆ. ನಮ್ಮ ಗ್ಯಾರಂಟಿಗಳನ್ನು ಟೀಕೆ ಮಾಡುತ್ತಾ ಇವುಗಳನ್ನು ಸ್ಥಗಿತಗೊಳಿಸಲು ಪಿತೂರಿ ಮಾಡುತ್ತಿರುವ ಬಿಜೆಪಿ, ಜೆಡಿಎಸ್ ಯಾವತ್ತೂ ಜನಪರ ಯೋಜನೆಗಳನ್ನು ಜಾರಿ ಮಾಡಲಿಲ್ಲ ಎಂದು ಟೀಕಿಸಿದರು.
ಗಗನಚುಕ್ಕಿ-ಭರಚುಕ್ಕಿ ಜಲಪಾತಗಳನ್ನು ಪ್ರವಾಸೋದ್ಯಮದ ದೃಷ್ಟಿಯಿಂದ ಅಭಿವೃದ್ಧಿಗೊಳಿಸಲಾಗುವುದು. ಅಗತ್ಯವಿದ್ದಷ್ಟು ಹಣ ನೀಡಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸಲಾಗುವುದು. ದೇಶಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯ ಕರ್ನಾಟಕ. ಪ್ರವಾಸೋದ್ಯಮ ಬೆಳವಣಿಗೆಗೆ ಪ್ರಕೃತಿದತ್ತವಾದ ಪೂರಕ ವಾತಾವರಣವಿದೆ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ರಾಜ್ಯದ ಆರ್ಥಿಕ ಪ್ರಗತಿಯೂ ಆಗುತ್ತದೆ. ವಿಸಿ ನಾಲೆಯ ಕೊನೆ ಭಾಗಕ್ಕೆ ನೀರು ತಲುಪಿಸಲು ಕೂಡಲೇ ಪ್ರಸ್ತಾವನೆ ಸಲ್ಲಿಸಲು ಕಾವೇರಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ನಿಲ್ಲಿಸಲು ಪಿತೂರಿ ಮಾಡುತ್ತಿರುವವರು ಕೇಂದ್ರದಿಂದ ಹಣ ತಂದು ಮಂಡ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತಿಲ್ಲ. ಕೇವಲ ಮಾತಾಡಿಕೊಂಡು ಕಾಲ ಕಳೆಯುವವರಿಗೆ ರೈತರು, ಹಿಂದುಳಿದವರು, ದಲಿತರ ಪರವಾದ ಕಾಳಜಿಯೇ ಇಲ್ಲ ಎನ್ನುವುದು ಸಾಬೀತಾಗಿದೆ ಎಂದು ದೂರಿದರು.
ರಾಜ್ಯದಲ್ಲಿ ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಹಿಂದುಳಿದ ವರ್ಗ, ಲೋಕೋಪಯೋಗಿ ಇಲಾಖೆಯ ಎಲ್ಲಾ ಕೆಲಸಗಳೂ ನಡೆಯುತ್ತಿವೆ. ಯಾವುದೇ ಇಲಾಖೆಯ ಒಂದೂ ಕೆಲಸವೂ ಸ್ಥಗಿತಗೊಂಡಿಲ್ಲ. ಆದ್ದರಿಂದ ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಸುಳ್ಳಿನ ಸರದಾರರ ಮಾತಿಗೆ ಬೆಲೆ ಕೊಡಬೇಡಿ. ಪೂರಿಗಾಲಿ ಏತನೀರಾವರಿ ಯೋಜನೆಯನ್ನು ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಆರಂಭಿಸಿದ್ದೆ. ಈ ಯೋಜನೆಯನ್ನು ನಾನೇ ಉದ್ಘಾಟಿಸುತ್ತೇನೆ. ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.
ಬಳಿಕ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಮಾತನಾಡಿ, "ಅಂಜದೆ ಅಳುಕದೆ, ಗೊಡ್ಡು ಬೆದರಿಕೆಗೆ ಹೆದರದೆ, ರಾಜ್ಯದ ಜನರ ಹಿತ ಕಾಯುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ. 2013 ರಿಂದ ಇಲ್ಲಿಯವರೆಗೆ ಗಗನಚುಕ್ಕಿ ಜಲಪಾತದ ಅಭಿವೃದ್ಧಿಗೆ, ಮಳವಳ್ಳಿ ಕ್ಷೇತ್ರದ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಸಹಕಾರ ನೀಡಿದ್ದಾರೆ. ಹಾದಿ ಬೀದಿಯಲ್ಲಿ ಮಾತನಾಡುವವರಿಗೆ ಸಿಎಂ ಸಿದ್ದರಾಮಯ್ಯ ಅವರನ್ನು ಅಲುಗಾಡಿಸಲು ಸಾಧ್ಯವಿಲ್ಲ. ನೀವು ಯಾವುದೇ ಕಾರಣಕ್ಕೂ ಅಲುಗಾಡಬಾರದು. ನಿಮ್ಮ ಜೊತೆ ನಾವು ಇದ್ದೇವೆ ಎಂದರು.
ಇದನ್ನೂ ಓದಿ: ಸೆ. 14-15 ರಂದು ಮಂಡ್ಯದಲ್ಲಿ ಗಗನಚುಕ್ಕಿ ಜಲಪಾತೋತ್ಸವ; 2 ದಿನವೂ ಉಚಿತ ಊಟದ ವ್ಯವಸ್ಥೆ - Gaganachukki Waterfall Festival