ಮೈಸೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಪತ್ನಿ ಸೈಟ್‌ಗಳನ್ನು ವಾಪಸ್ ಕೊಟ್ಟಿದ್ದಾರೆ. ಆದರೆ ಈಗ ವಾಪಸ್ ಕೊಟ್ಟರೂ ಅಷ್ಟೇ, ಕೊಡದಿದ್ದರೂ ಅಷ್ಟೇ. ತನಿಖೆ ಆಗಲೇಬೇಕು. ಸಿಎಂ ಪತ್ನಿಯ ಭಾವನಾತ್ಮಕ ಪತ್ರ ವರ್ಕ್‌ಔಟ್ ಆಗುವುದಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಇಂದು ಮೈಸೂರಿನ ಲೋಕಾಯುಕ್ತ ಕಚೇರಿಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಈ ಹಿಂದೆಯೇ ಸೈಟ್ ವಾಪಸ್ ಕೊಟ್ಟು, ಮುಡಾ ಹಗರಣ ತನಿಖೆ ಮಾಡಿಸಿ ಎಂದು ಹೇಳಿದ್ದೆ. ಅವರು ಕೇಳಲಿಲ್ಲ. ಈಗ ಈ ಪರಿಸ್ಥಿತಿಗೆ ಬಂದಿದ್ದಾರೆ ಎಂದರು.
ಪಾರ್ವತಮ್ಮನವರಿಗೆ ತಮ್ಮ ಪತಿಯ ತಪಸ್ಸಿನ ರೀತಿಯ ರಾಜಕಾರಣಕ್ಕಿಂತ ಸೈಟ್ ಮುಖ್ಯವಾಗಿ ಇಷ್ಟು ದಿನ ಹಠ ಹಿಡಿದು ಕೂತಿದ್ದೇ ದೊಡ್ಡ ತಪ್ಪು. ಸೈಟ್ ವಾಪಸ್ ಕೊಡುವುದಾಗಿದ್ದರೆ ಹೈಕೋರ್ಟ್ನಲ್ಲೇಕೆ ಈ ಬಗ್ಗೆ ಹೋರಾಟ ಮಾಡಬೇಕಾಯಿತು?. ತಪ್ಪಿನ ಅರಿವಾಗಿ ಸೈಟ್ ವಾಪಸ್ ನೀಡಿದ್ದೀರಿ. ನಿಮ್ಮ ಈ ಭಾವನಾತ್ಮಕ ಕಾರ್ಡ್ ವರ್ಕ್ ಆಗುವುದಿಲ್ಲ. ಪ್ರಕರಣದಲ್ಲಿ ತನಿಖೆ ನಡೆಯಬೇಕು ಎಂದರು.
ಎರಡೂವರೆ ತಿಂಗಳ ಹಿಂದೆ ಮುಡಾ ಸೈಟ್‌ಗಳನ್ನು ವಾಪಸ್ ಕೊಟ್ಟಿದ್ದರೆ, ಇವತ್ತು ಪ್ರಾಸಿಕ್ಯೂಷನ್, ಕೇಸ್ ಏನೂ ಆಗುತ್ತಿರಲಿಲ್ಲ. ಕುರ್ಚಿಯೂ ಅಲುಗಾಡುತ್ತಿರಲಿಲ್ಲ. ಆದರೆ ಹೊಗಳುಭಟ್ಟರು ಬಹುಪರಾಕ್ ಹಾಕುವವರನ್ನು ಇಟ್ಟುಕೊಂಡಿರುವ ಪರಿಣಾಮ ಸಿಎಂಗೆ ಈ ಸ್ಥಿತಿ ಬಂತು ಎಂದು ಹೇಳಿದರು.
ಕದ್ದ ಕಳ್ಳ ಒಡವೆ ವಾಪಸ್ ಕೊಟ್ಟರೆ ಕೇಸ್ ಮುಗಿಯುತ್ತಾ?: ಅಧಿಕಾರದಲ್ಲಿದ್ದಾಗ ಕುಟುಂಬ ಹತ್ತಿರ ಇಟ್ಟುಕೊಂಡರೆ, ಮಕ್ಕಳನ್ನು ಬೆಳೆಸಲು ಮುಂದಾದರೆ ಅದೇ ಕುಟುಂಬಸ್ಥರು ನಿಮ್ಮ ಹೆಸರಿಗೆ ಕಳಂಕ ತರುತ್ತಾರೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ. ಒಡವೆ ಕದ್ದ ಕಳ್ಳ ಒಡವೆ ವಾಪಸ್ ಕೊಟ್ಟರೆ ಕೇಸ್ ಮುಗಿಯುತ್ತಾ? ಇಲ್ಲಾ ಅಲ್ವಾ? ಸಿಎಂ ತಮ್ಮ ಸೈಟ್ಗೆ 64 ಕೋಟಿ ರೂ. ಕೇಳಿದ ದಿನವೇ ಅವರ ಮೇಲಿನ ಗೌರವ, ವಿಶ್ವಾಸ ನೆಲಕಚ್ಚಿತು ಎಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಮತ್ತು ಲೋಕಾಯುಕ್ತ ಎಡಿಜಿಪಿ ನಡುವಿನ ಜಟಾಪಟಿ ಕುರಿತು ಮಾತನಾಡಿ, ಚಂದ್ರಶೇಖರ್ ಬಗ್ಗೆ ಕುಮಾರಸ್ವಾಮಿ ಬಳಿ ದಾಖಲೆ ಇರಬಹುದು. ಅದಕ್ಕೆ ಆರೋಪ ಮಾಡಿದ್ದಾರೆ. ಅಧಿಕಾರಿ ಚಂದ್ರಶೇಖರ್ ಸತ್ಯವಂತರಾಗಿದ್ದರೆ, ಕುಮಾರಸ್ವಾಮಿ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಲಿ. ಅವರು ಕರ್ನಾಟಕ ಕೇಡರ್ ಅಧಿಕಾರಿ ಅಲ್ಲ. ಹಿಮಾಚಲ ಕೇಡರ್ ಅಧಿಕಾರಿ. ನೀವು ಯಾಕೆ ಕರ್ನಾಟಕದಲ್ಲಿದ್ದೀರಿ?. ನೀವು ಈ ರಾಜ್ಯದಿಂದ ತೊಲಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.