ಕೊಡಗು: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರವಹಿಸಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಿನ್ನೆಲೆ ಕೊಡಗು ಜಿಲ್ಲೆಗೆ ಭೇಟಿ ನಿಡಿರುವ ಸಿಎಂ ಮಾಧ್ಯಮಗಳೊಂದಿಗೆ ಮಾತನಾಡಿದರು. ’’ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದಕ್ಕೆ ಕೊಡಗಿನ ಜನತೆಗೆ ಧನ್ಯವಾದ ಸಲ್ಲಿಸಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರವಹಿಸಿ ಸ್ವಾತಂತ್ರ್ಯ ತಂದುಕೊಟ್ಟಿದೆ. ಅಷ್ಟೇ ಏಕೆ ಸಂವಿಧಾನವನ್ನು ಕೊಟ್ಟಿದ್ದು ಸಹ ಕಾಂಗ್ರೆಸ್ ಪಕ್ಷ. ಬಿಜೆಪಿ ಯಾವುದೇ ಹೋರಾಟದಲ್ಲಿ ಭಾಗಿಯಾಗಿಲ್ಲ ಆದರೂ ದೇಶದ ಬಗ್ಗೆ ಮಾತನಾಡುತ್ತಾರೆ.
ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಆದರೆ, ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಯಾವುದೇ ಭರವಸೆ ಬಗೆಹರಿಸಿಲ್ಲ. ನಾವು ಅಧಿಕಾರಕ್ಕೆ ಬಂದು 8 ತಿಂಗಳಲ್ಲಿ ನೀಡಿದ್ದ ಭರವಸೆಗಳನ್ನು ಜಾರಿಗೆ ತಂದಿದ್ದೇವೆ. ಕರ್ನಾಟಕ ರಾಜ್ಯ ದಿವಾಳಿಯಾಗುತ್ತೆ ಎಂದು ಮೋದಿ ಹೇಳಿದ್ದರು. ಆದರೆ, ನಾವು ಅಭಿವೃದ್ಧಿ ಕೆಲಸಗಳನ್ನು ಮಾಡಲು ಬಂದಿದ್ದೇವೆ. ಅಭಿವೃದ್ಧಿ ಕೆಲಸಗಳಿಗೆ ಹಣ ಕೊಡುತ್ತಿದ್ದೇವೆ, ಮುಂದಿನ ವರ್ಷ 58 ಸಾವಿರ ಕೋಟಿ ಖರ್ಚು ಮಾಡುತ್ತೇವೆ.
ನಾವು ಜಾತಿ, ಧರ್ಮ, ಭಾಷೆ ಯಾವುದನ್ನು ವಿಂಗಡಣೆ ಮಾಡುವುದಿಲ್ಲ. 139 ಕೋಟಿ ಮಹಿಳೆಯರು ಈ ವರೆಗೂ ಶಕ್ತಿಯೋಜನೆಯಡಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇಂತಹ ಕಾರ್ಯಕ್ರಮ ಬಿಜೆಪಿ ಮಾಡಿತ್ತಾ, ಮಾಡೋದಕ್ಕೆ ಆಗುತ್ತಾ. ಈ ವರ್ಷ ಬರಗಾಲ ಇದೆ. ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ. ಸಂಸದ ಪ್ರತಾಪ್ ಸಿಂಹ ಕೊಡಗಿಗೆ ಒಂದು ರೂಪಾಯಿ ಅನುದಾನವನ್ನೂ ತಂದಿಲ್ಲ. ರೈಲು ಬಿಡುವುದರಲ್ಲಿ ಪ್ರತಾಪ ತೋರಿದ್ದಾರೆ ಅಷ್ಟೇ. ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇಶಕ್ಕೆ ಅಣೆಕಟ್ಟು ಕಟ್ಟಿ ನೀರಾವರಿ ವ್ಯವಸ್ಥೆ ಮಾಡಿದ್ದು ನಮ್ಮ ಪಕ್ಷ. ಬಿಜೆಪಿ ಇಲ್ಲಿಯವರೆಗೂ ಒಂದೇ ಒಂದು ಅಣೆಕಟ್ಟು ಕಟ್ಟಿಲ್ಲ. ಹಸಿರು ಕ್ರಾಂತಿ ಮಾಡಿದ್ದು ಕಾಂಗ್ರೆಸ್, ದೇಶ ಅಭಿವೃದ್ಧಿ ಅಂತ ಆಗಿದ್ದರೆ ಅದು ಕಾಂಗ್ರೆಸ್ ನಿಂದ ಮಾತ್ರ ಎಂದರು. ಬಳಿಕ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಟ್ಟಿದ್ದೆವು. ಆದರೇ ಚುನಾವಣೆಯಲ್ಲಿ ಸೋತರು. ಚುನಾವಣೆ ಸೋತರು ಶೆಟ್ಟರನ್ನು ಎಂಎಲ್ಸಿ ಮಾಡಿದ್ದೆವು. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಯಾವುದೇ ಅನ್ಯಾಯ ಆಗಿಲ್ಲ. ಒಮ್ಮೆ ಅವರು ನನಗೆ ಬಿಜೆಪಿಯಲಿ ಅವಮಾನ ಆಗಿದೆ ಮತ್ತೆಂದು ಅಲ್ಲಿಗೆ ಹೋಗಲ್ಲ ಎಂದಿದ್ದರು ಎಂದು ತಿಳಿಸಿದರು. ನಿಗಮ ಮಂಡಳಿ ನೇಮಕ ಕುರಿತು ಪ್ರತಿಕ್ರಿಯಿಸಿ ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ಗುಡ್ಬೈ: ಬಿಜೆಪಿಗೆ ಮರಳಿದ ಜಗದೀಶ್ ಶೆಟ್ಟರ್