ಬೆಂಗಳೂರು: ನನಗೆ ರಾಜಕೀಯ ತೇಜೋವಧೆ ಆಗುತ್ತಿರುವುದನ್ನು ಮನಗಂಡು ಪತ್ನಿ ಸ್ವತಂತ್ರವಾಗಿ ಮುಡಾ ನಿವೇಶನ ವಾಪಸ್ ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಆಯೋಜಿಸಲಾಗಿದ್ದ 'ವಿಶ್ವ ಹಿರಿಯ ನಾಗರಿಕರ ದಿನಾಚರಣೆ-202' ಕಾರ್ಯಕ್ರಮ ಮುಗಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪತ್ನಿ ನನ್ನ ಜೊತೆಗೆ ಚರ್ಚೆ ಮಾಡಿಲ್ಲ. ಸ್ವತಂತ್ರವಾಗಿ ತೀರ್ಮಾನ ಕೈಗೊಂಡಿದ್ದಾರೆ. ಅವರ ಸಹೋದರ ದಾನವಾಗಿ ನೀಡಿದ ಜಮೀನು ಅದು. ಮುಡಾದವರು ಆ ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಂಡು ನಿವೇಶನ ಮಾಡಿ ಬೇರೆಯವರಿಗೆ ಹಂಚಿಕೆ ಮಾಡಿದ್ದರು. ಬದಲಿ ನಿವೇಶನವಾಗಿ ವಿಜಯನಗರದಲ್ಲಿ ನೀಡಿದ್ದರು. ಮುಡಾಗೆ ನಾವೇನು ಅಲ್ಲೇ ಕೊಡಿ ಎಂದು ಕೇಳಿರಲಿಲ್ಲ. ಅವರೇ ವಿಜಯನಗರದಲ್ಲಿ ನಿವೇಶನ ಕೊಟ್ಟಿದ್ದರು. ಆದರೆ ಈಗ ವಿವಾದದಿಂದ ಬೇಸರಗೊಂಡು ನನ್ನ ಪತಿಗೆ ರಾಜಕೀಯ ತೇಜೋವಧೆ ಆಗುತ್ತಿದೆ, ಹಾಗಾಗಿ ಸೈಟ್ ಬೇಡವೇ ಬೇಡ ಎಂದು ವಾಪಸ್ ಕೊಟ್ಟಿದ್ದಾರೆ ಎಂದು ಹೇಳಿದರು.
'ಹಣಕಾಸು ವರ್ಗಾವಣೆ ಆಗಿಲ್ಲ': ಮುಡಾ ಪ್ರಕರಣದಲ್ಲಿ ಇ.ಡಿ. ತನಿಖೆಯ ಕುರಿತು ಪ್ರತಿಕ್ರಿಯಿಸಿ, ಕಾನೂನು ಏನಾದರೂ ಕ್ರಮ ಕೈಗೊಳ್ಳಲಿ. ಯಾವ ಆಧಾರದಲ್ಲಿ ಪ್ರಕರಣ ದಾಖಲು ಮಾಡಿದ್ದಾರೋ ಗೊತ್ತಿಲ್ಲ. ಈ ಪ್ರಕರಣದಲ್ಲಿ ಹಣಕಾಸು ವರ್ಗಾವಣೆ ಆಗಿಲ್ಲ. ನನ್ನ ಪಾತ್ರ ಈ ಪ್ರಕರಣದಲ್ಲಿ ಏನೂ ಇಲ್ಲ ಎಂದರು.
'ನಾನು ತಪ್ಪೇ ಮಾಡಿಲ್ಲ': ಮುಡಾ ನಿವೇಶನ ನೀಡಿ ತಪ್ಪು ಒಪ್ಪಿಕೊಂಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಹೇಗೆ ತಪ್ಪು ಒಪ್ಪಿದಂತಾಗುತ್ತದೆ? ನನ್ನ ಹೆಂಡತಿ ಮನನೊಂದು ನಿವೇಶನ ವಾಪಸ್ ಮಾಡಿದ್ದಾರೆ. ಬಿಜೆಪಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ರಾಜೀನಾಮೆ ಕೊಟ್ಟರೆ ಮುಗಿದು ಹೋಗುತ್ತಾ? ನಾನು ತಪ್ಪೇ ಮಾಡಿಲ್ಲವಲ್ಲ ಎಂದು ತಿರುಗೇಟು ನೀಡಿದರು.
'ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ': ಬಿ.ಎಸ್.ಯಡಿಯೂರಪ್ಪನವರದ್ದು ಮತ್ತು ನನ್ನದು ಬೇರೆ ಬೇರೆ ಪ್ರಕರಣ. ಅವರು ಡಿನೋಟಿಫಿಕೇಷನ್ ಮಾಡಿದ್ದಾರೆ. ನಾನೇನು ಮಾಡಿದ್ದೇನಾ? ನನ್ನ ಆದೇಶ ಪತ್ರ ವ್ಯವಹಾರ ಇತ್ತಾ? ಆ ಪ್ರಕರಣಕ್ಕೂ ಇದಕ್ಕೂ ಸಂಬಂಧ ಇಲ್ಲ. ನಾನು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡಿದ್ದೇನೆ. ಹೀಗಾಗಿ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಛರಿಸಿದರು.
ಇದನ್ನೂ ಓದಿ: ನಿವೇಶನ ಹಿಂತಿರುಗಿಸುವ ನಿರ್ಧಾರ ನನಗೂ ಅಚ್ಚರಿ ಉಂಟು ಮಾಡಿದೆ: ಪತ್ನಿ ಪತ್ರದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ - Muda Case