ಬೆಂಗಳೂರು: ನಾಡಿನ ಜನತೆ ನೀಡಿದ ತೀರ್ಪನ್ನು ಗೌರವಿಸಿ, ಸಂವಿಧಾನದ ಆಶಯಗಳ ಪ್ರಕಾರ ಪ್ರತಿಪಕ್ಷಗಳು ಜವಾಬ್ದಾರಿಯುತವಾಗಿ ನಡೆಯಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ರಾಜ್ಯದ ಜನತೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧವನ್ನು ಸಂವಿಧಾನ ಸ್ಪಷ್ಟಪಡಿಸಿದೆ. ಜನಕಲ್ಯಾಣ ಕಾರ್ಯಗಳನ್ನು ಅನುಷ್ಠಾನಗೊಳಿಸುವುದು ರಾಜ್ಯಗಳ ಜವಾಬ್ದಾರಿಯಾಗಿದೆ. ಅವುಗಳಿಗೆ ಪೂರಕವಾಗಿ ಸಂಪನ್ಮೂಲ ಒದಗಿಸುವುದು ಕೇಂದ್ರದ ಹೊಣೆಗಾರಿಕೆ ಎಂದು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಈ ಆಶಯದಿಂದ ದೂರ ಸರಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ. ಸಂವಿಧಾನದ ಆಶಯಗಳನ್ನು ನಿರ್ಲಕ್ಷಿಸಿ, ರಾಜ್ಯಗಳಿಗೆ ದೊರೆಯಬೇಕಾದ ಹಣಕಾಸಿನ ಪಾಲನ್ನು ನೀಡಲು ಮೀನಾಮೇಷ ಎಣಿಸಲಾಗುತ್ತಿದೆ. ಕೇಂದ್ರದಿಂದ ನ್ಯಾಯಯುತವಾಗಿ ಬರಬೇಕಾದ ಪರಿಹಾರದ ಮೊತ್ತ ಪಡೆಯಲು ನ್ಯಾಯಾಲಯದ ಮೊರೆ ಹೋಗುವ ಅನಿವಾರ್ಯತೆ ಎದುರಾಗಿರುವುದು ಜನಹಿತಕ್ಕೆ ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಾದರೂ ಕೇಂದ್ರ ಸರ್ಕಾರ, ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಮನಗಂಡು ರಾಜ್ಯಗಳ ಅಭಿವೃದ್ಧಿಗೆ ಅನುದಾನಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಜನತೆಯ ತೀರ್ಪನ್ನು ಧಿಕ್ಕರಿಸಿ ನಡೆಸುವ ಹಿಂಬಾಗಿಲ ರಾಜಕಾರಣವನ್ನು ಇತಿಹಾಸದಲ್ಲಿ ಜನತೆ ಎಂದಿಗೂ ಕ್ಷಮಿಸಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಾಡಿನ ಮಹಾ ಜನತೆ ನೀಡಿದ ತೀರ್ಪನ್ನು ಗೌರವಿಸಿ, ಸಂವಿಧಾನದ ಆಶಯಗಳ ಪ್ರಕಾರ ವಿರೋಧಪಕ್ಷಗಳು ಜವಾಬ್ದಾರಿಯುತವಾಗಿ ನಡೆಯಬೇಕೆಂಬುದನ್ನು ಎಲ್ಲರೂ ನಿರೀಕ್ಷಿಸುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ರಾಜಕೀಯ ಪ್ರಬುದ್ಧತೆ ಮೆರೆದಿರುವ ಮತದಾರರು, ಪ್ರಜಾಪ್ರಭುತ್ವ ಯಾರ ಕೈಗೊಂಬೆಯಾಗಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿದ್ದಾರೆ.
ಪಂಚ ಗ್ಯಾರಂಟಿ ಮೂಲಕ ಕರ್ನಾಟಕ ಮಾದರಿ: ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಗೆ ವಿಶೇಷವಾದ ಆದ್ಯತೆ ನೀಡಿ ರಾಜ್ಯದ ಸರ್ವತೋಮುಖ ಬೆಳವಣಿಗೆಯನ್ನು ಸಾಧಿಸುವ ಮತ್ತು ಆ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳುವ ಕಾರ್ಯವನ್ನು ಕರ್ನಾಟಕದಲ್ಲಿ ನಾವು ಮಾಡುತ್ತಿದ್ದೇವೆ. ಇದು ಅಭಿವೃದ್ಧಿಯ ಕರ್ನಾಟಕ ಮಾದರಿ. ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯದ ಸಮಸ್ತ ಜನರ ಬದುಕಿಗೆ ಒಂದು ಆರ್ಥಿಕ ಭದ್ರತೆಯನ್ನು ಒದಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಹೇಳಿದರು.
ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಸವಳಿದು ಹೋಗಿರುವ ಜನರ ಬದುಕಿಗೆ ಈ ಯೋಜನೆಗಳು ನೆಮ್ಮದಿ ತಂದಿವೆ. ಈ ಯೋಜನೆಗಳ ಮೂಲಕ ಸಂಪತ್ತಿನ ಮರುಹಂಚಿಕೆಗೆ ಒತ್ತು ನೀಡುತ್ತಲೇ ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಸುಸ್ಥಿರವಾದ ರೀತಿಯಲ್ಲಿ ಹೆಚ್ಚಿಸಲು ಕೂಡಾ ಅಷ್ಟೇ ಬದ್ಧತೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಆರ್ಥಿಕ ಬೆಳವಣಿಗೆ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುವುದರ ಜೊತೆಜೊತೆಗೆ ಈ ನೆಲದ ಸಾಮಾಜಿಕ ಸೌಹಾರ್ದತೆ ಮತ್ತು ಸಹಬಾಳ್ವೆಯ ಪರಂಪರೆಯನ್ನು ಮುಂದುವರೆಸಿ, ಕರ್ನಾಟಕವನ್ನು ನಿಜ ಅರ್ಥದಲ್ಲಿ 'ಸರ್ವ ಜನಾಂಗದ ಶಾಂತಿಯ ತೋಟ'ವನ್ನಾಗಿ ರೂಪಿಸಲು ನಾವು ಕಾರ್ಯತತ್ಪರರಾಗಿದ್ದೇವೆ ಎಂದರು.
ಪಂಚ ಗ್ಯಾರಂಟಿ ಮುಂದುವರೆಯಲಿದೆ: ನಮ್ಮ 5 ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳಿಂದಾಗಿ ಮಾಸಿಕ ಸರಾಸರಿ 4,000-5,000 ರೂ.ಗಳಷ್ಟು ಪ್ರತಿ ಫಲಾನುಭವಿ ಕುಟುಂಬಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಲಭಿಸುತ್ತಿದೆ. ಇದು ಹಲವು ಕಾರಣಗಳಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೇರ ಆರ್ಥಿಕ ನೆರವು ನೀಡುವ ಸಾರ್ವತ್ರಿಕ ಮೂಲ ಆದಾಯ (Universal Basic Income) ಪರಿಕಲ್ಪನೆ. ಮುಂದುವರೆದ ರಾಷ್ಟ್ರಗಳಲ್ಲಿ ಆರ್ಥಿಕವಾಗಿ ಅಶಕ್ತ ವರ್ಗಗಳಿಗೆ ನೆರವಾಗಲು ಜಾರಿಗೊಳಿಸಲಾಗುತ್ತಿರುವ ಇಂತಹ ಯೋಜನೆಯೊಂದನ್ನು ಅತೀ ದೊಡ್ಡಮಟ್ಟದಲ್ಲಿ ಸಾಕಾರಗೊಳಿಸುತ್ತಿರುವ ರಾಜ್ಯ ಕರ್ನಾಟಕ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಈ ಯೋಜನೆಗಳು ಮುಂದುವರೆಯಲಿವೆ. ಮಾತ್ರವಲ್ಲ, ಈ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಭವಿಷ್ಯ ನುಡಿದವರಿಗೆ ರಾಜ್ಯದಲ್ಲಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿ ತೋರಿಸುವ ಮೂಲಕ ನಾವು ಉತ್ತರಿಸಲಿದ್ದೇವೆ ಎಂದು ತಿರುಗೇಟು ನೀಡಿದರು.
ನೆರೆ ರಾಷ್ಟ್ರಗಳ ಪ್ರಕ್ಷುಬ್ಧತೆ ಇಲ್ಲೂ ತಲೆದೋರಬಹುದು: ದೇಶದ ಚಲನಶೀಲ, ಸ್ಪಂದನಾಶೀಲ ಪ್ರಜಾಪ್ರಭುತ್ವಕ್ಕೆ ನಮ್ಮ ಸಂವಿಧಾನವೇ ಶ್ರೀರಕ್ಷೆಯಾಗಿದೆ. ದೇಶದಲ್ಲಿ ನಮ್ಮ ಪ್ರಜಾಪ್ರಭುತ್ವ ಕ್ರಿಯಾಶೀಲವಾಗಲು, ಜನಜೀವನದ ಸಹಜ ಮತ್ತು ಅವಿಭಾಜ್ಯ ಭಾಗವಾಗಿರಲು ಎದುರಾಗಬಹುದಾದ ಅಡ್ಡಿ-ಆತಂಕಗಳ ಕುರಿತು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಂದೇ ಮುನ್ನೆಚ್ಚರಿಕೆ ನೀಡಿದ್ದರು. ಮೊದಲನೆಯದಾಗಿ, ಜಾತಿ-ಮತದ ಆಧಾರದ ವಿಭಜನೆಯ ರಾಜಕಾರಣ ಮಾಡುವ ವಿಚ್ಛಿದ್ರಕಾರಿ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡಬೇಕು. ಅಂತಿಮವಾಗಿ ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲದ ರಾಜಕೀಯ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದರು. ಇಲ್ಲದಿದ್ದರೆ ನೆರೆಹೊರೆಯ ದೇಶಗಳಲ್ಲಿ ತಲೆದೋರಿರುವ ಪ್ರಕ್ಷುಬ್ಧ ಪರಿಸ್ಥಿತಿ ಇಲ್ಲಿಯೂ ಎದುರಾಗಿ ಬಿಡಬಹುದು ಎಂಬ ಎಚ್ಚರಿಕೆ ನಮ್ಮೆಲ್ಲರಲ್ಲಿ ಇರಬೇಕಾಗುತ್ತದೆ ಎಂದು ಸಿಎಂ ಎಚ್ಚರಿಕೆ ನೀಡಿದರು.
ಬರ, ಮಳೆ ಪರಿಹಾರ ವಿತರಣೆ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಎರಡು ಮುಂಗಾರು ಹಂಗಾಮುಗಳಲ್ಲಿ ರಾಜ್ಯ ಸಂಪೂರ್ಣ ವಿಭಿನ್ನ ಪರಿಸ್ಥಿತಿಯನ್ನು ಎದುರಿಸಿದೆ. ಕಳೆದ ವರ್ಷ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾದರೆ, ಈ ಬಾರಿ ಅತಿವೃಷ್ಟಿಗೆ ಒಳಗಾಗಿದೆ. ಕೇಂದ್ರ ಸರ್ಕಾರವು ಬರ ಪರಿಹಾರದ ಮೊತ್ತವನ್ನು ತಡವಾಗಿ ನೀಡಿದರೂ, ರಾಜ್ಯದಲ್ಲಿ ಬರದಿಂದಾಗಿ ಜನರಿಗೆ ಹೆಚ್ಚಿನ ಅನಾನುಕೂಲಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.
78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ನೇರಪ್ರಸಾರ https://t.co/yhoAKDrMH4
— CM of Karnataka (@CMofKarnataka) August 15, 2024
ಎನ್ಡಿಆರ್ಎಫ್ ಅಡಿ ಪರಿಹಾರ ಬಿಡುಗಡೆಯಾಗುವ ಮುನ್ನವೇ ರಾಜ್ಯ ಸರ್ಕಾರ ಬರಗಾಲದಿಂದ ಬಾಧಿತರಾದ ಪ್ರತಿ ರೈತರಿಗೆ 2,000 ರೂ.ವರೆಗೆ ಒಟ್ಟು 636.45 ಕೋಟಿ ರೂ.ಗಳ ಮಧ್ಯಂತರ ಪರಿಹಾರ ವಿತರಿಸಿದೆ. ಒಟ್ಟಾರೆ, ಬೆಳೆ ನಷ್ಟ ಅನುಭವಿಸಿದ 38,58,737 ರೈತರಿಗೆ 3454.66 ಕೋಟಿ ರೂ. ಬೆಳೆಹಾನಿ ಪರಿಹಾರವನ್ನು ಎನ್ಡಿಆರ್ಎಫ್ ಅಡಿ ವಿತರಿಸಲಾಗಿದೆ. ಇದರೊಂದಿಗೆ 17.88 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳಿಗೆ ಜೀವನ ನಿರ್ವಹಣೆಗಾಗಿ ಒಟ್ಟು 512.83 ಕೋಟಿ ರೂ.ಗಳಷ್ಟು ಜೀವನೋಪಾಯ ಪರಿಹಾರ ವಿತರಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಭೂ ಕುಸಿತ ಅಪಾಯದ ಗ್ರಾಮ ಗುರುತಿಸಿ ಕ್ರಮ: ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಸಾಧಿಸುವುದು ಅತಿ ಅಗತ್ಯ ಎಂಬ ಪ್ರಕೃತಿಯ ಎಚ್ಚರಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಈ ನಿಟ್ಟಿನಲ್ಲಿ ಭೂ-ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆಯು ರಾಜ್ಯದ ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಒಳಪಡುವ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿನ 250 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಭೂ-ಕುಸಿತ ಸಂಭವಿಸಬಹುದಾದ 1,351 ಗ್ರಾಮಗಳನ್ನು ಗುರುತಿಸಿದೆ. ಈ ಪ್ರದೇಶಗಳಲ್ಲಿ ಭೂ-ಕುಸಿತ ತಡೆಗಟ್ಟಲು ಭೂ-ವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ಮತ್ತು National Institute of Rock Mechanics (NIRM) ಸಹಯೋಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಉಪಶಮನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಇದನ್ನೂ ಓದಿ: LIVE: ಸ್ವಾತಂತ್ರ್ಯ ದಿನಾಚರಣೆ: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ - Independence Day