ಬೆಳಗಾವಿ: "ಪಂಚಮಸಾಲಿ ಮೀಸಲಾತಿ ಹೋರಾಟಗಾರರನ್ನು ಮಾತುಕತೆಗೆ ಬನ್ನಿ ಅಂತ 10 ಜನ ಪ್ರಮುಖರನ್ನು ನಾನು ಕರೆದಿದ್ದೆ. ಆದ್ರೆ ಅವರು ಯಾರೂ ಬರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವುದು ಅವರ ಹಕ್ಕು. ಪ್ರತಿಭಟನೆ ಮಾಡಲಿ. ನಾವು ವಿರೋಧಿಸುವುದಿಲ್ಲ" ಎಂದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಆದಿತ್ಯ ಠಾಕ್ರೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಮಹಾಜನ್ ಆಯೋಗದ ವರದಿ ಅಂತಿಮ. ಪದೇ ಪದೇ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತೆ ಅನ್ನೋದು ಮೂರ್ಖತನ. ಬಾಲಿಶ ಹೇಳಿಕೆ. ಇದನ್ನು ಕರ್ನಾಟಕ ಸರ್ಕಾರ ಸಹಿಸೋದಿಲ್ಲ ಎಂದು ಎಚ್ಚರಿಸಿದರು.
ಇವತ್ತು ಎಸ್.ಎಂ ಕೃಷ್ಣ ಅವರು ನಿಧನರಾಗಿದ್ದಾರೆ. ಆರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. 93ನೇ ವರ್ಷಕ್ಕೆ ಕಾಲಿಟ್ಟಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಸ್ನೇಹಿತರಿಗೆ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಕೊಡಲಿ. ಮೂರು ದಿನ ಶೋಕಾಚರಣೆ ಮಾಡಲು ಆದೇಶ ಹೊರಡಿಸಿದ್ದೇವೆ. ಸಂಜೆ ಬೆಂಗಳೂರಿಗೆ ಹೋಗಿ ನಾಳೆ ಅವರ ಅಂತ್ಯ ಸಂಸ್ಕಾರಕ್ಕೆ ಹೋಗುತ್ತೇನೆ ಎಂದರು.
ವಿಧಾನಸೌಧದ ಆವರಣದಲ್ಲಿ ಎಸ್.ಎಂ.ಕೃಷ್ಣ ಅವರ ಪುತ್ಥಳಿ ನಿರ್ಮಾಣಕ್ಕೆ ಶಾಸಕರ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ: ಪೊಲೀಸರಿಂದ ಲಾಠಿ ಪ್ರಹಾರ, ಹಲವರಿಗೆ ಗಾಯ; ಸ್ವಾಮೀಜಿ, ಯತ್ನಾಳ್ ವಶಕ್ಕೆ