ಹಾಸನ (ಸಕಲೇಶಪುರ) : ಬಹುನಿರೀಕ್ಷಿತ ಬಯಲುಸೀಮೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು.
ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡನಾಗರ ಬಳಿ ಯೋಜನೆಗೆ ಮುಖ್ಯಮಂತ್ರಿ ಚಾಲನೆ ನೀಡಿದರು. ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದ ಸಿದ್ದರಾಮಯ್ಯ, 9ನೇ ಪಂಪ್ ಹೌಸ್ನಲ್ಲಿ ಕಂಪ್ಯೂಟರ್ ಮೂಲಕ ಮೋಟರ್ ಆನ್ ಮಾಡಿದರು. ಡಿಸಿಎಂ ಡಿ. ಕೆ ಶಿವಕುಮಾರ್, ಕೆ. ಎನ್ ರಾಜಣ್ಣ, ವೀರಪ್ಪಮೊಯ್ಲಿ, ಗೃಹಸಚಿವ ಜಿ. ಪರಮೇಶ್ವರ್, ಎಂ. ಬಿ. ಪಾಟೀಲ್, ಸಂಸದ ಶ್ರೇಯಸ್ ಪಟೇಲ್, ಸ್ಥಳೀಯ ಶಾಸಕ ಸಿಮೆಂಟ್ ಮಂಜು ಸೇರಿದಂತೆ ಸಚಿವ ಸಂಪುಟದ ಹಲವು ಸಹೋದ್ಯೋಗಿಗಳು ಸಿದ್ದರಾಮಯ್ಯಗೆ ಸಾಥ್ ನೀಡಿದರು.
2014ರಲ್ಲಿ ಪ್ರಾರಂಭಗೊಂಡ ಈ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಚಾಲನೆ ನೀಡಲಾಗಿತ್ತು. ಇಂದು ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ಹಿನ್ನಲೆ ಚಾಲನೆಗೂ ಮುನ್ನ ಸಿಎಂ ಪೂಜೆ ಸಲ್ಲಿಸಿ ಬಳಿಕ ಯೋಜನೆಗೆ ಚಾಲನೆ ನೀಡಿದರು. ಹಾಗಾಗಿ ಇಂದಿನಿಂದ ಬೆಂಗಳೂರು ಗ್ರಾಮಾಂತರ ಸೇರಿದಂತೆ ಬಯಲು ಸೀಮೆಯ 7 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದಕ್ಕೆ ಸಂಬಂಧಿಸಿದ ಯೋಜನೆ ಇದಾಗಿದ್ದು, ಎತ್ತಿನಹೊಳೆ ಕಾಲುವೆಯಲ್ಲಿ ಪಶ್ಚಿಮಘಟ್ಟದ ನೀರು ಹರಿಯಲಿದೆ. ಇದರಿಂದಾಗಿ ಬಯಲು ಸೀಮೆಭಾಗದ ಜನರಲ್ಲಿ ನಿರೀಕ್ಷೆಗಳು ಗರಿಗೆದರಿವೆ.
ಮುಖ್ಯಮಂತ್ರಿ @siddaramaiah ಅವರು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಸಕಲೇಶಪುರ ತಾಲ್ಲೂಕಿನ ಬೈಕೆರೆ ದೊಡ್ಡನಗರದ ಪಂಪ್ ಹೌಸ್ ನಲ್ಲಿ ಚಾಲನೆ ನೀಡಿದರು.
— CM of Karnataka (@CMofKarnataka) September 6, 2024
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 29 ತಾಲ್ಲೂಕುಗಳ ಕುಡಿಯುವ ನೀರು ಮತ್ತು ಕೆರೆ ತುಂಬಿಸುವ… pic.twitter.com/1QG7CTBVdS
23,000 ಕೋಟಿ ರೂಪಾಯಿ ವೆಚ್ಚದ ಯೋಜನೆ : ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಎತ್ತಿನಹೊಳೆ ಯೋಜನೆ 2014ರಲ್ಲಿ ಆರಂಭಗೊಂಡಿತ್ತು. ಪಶ್ಚಿಮಘಟ್ಟದಲ್ಲಿ ಹರಿಯುವ ಎತ್ತಿನಹೊಳೆ ಭಾಗದ ನೀರು ಪೋಲಾಗಿ ಸಮುದ್ರ ಸೇರುವುದನ್ನು ತಡೆದು 24 ಟಿಎಂಸಿ ನೀರನ್ನು ನದಿಗೆ ವಿರುದ್ಧವಾಗಿ ಪೈಪ್ ಲೈನ್ ಹಾಗೂ ಕಾಲುವೆ ಮೂಲಕ ಹರಿಸಿ ಬಯಲು ಸೀಮೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸಲು ಸಿದ್ದರಾಮಯ್ಯಯ ಅಂದು ಶಂಕುಸ್ಥಾಪನೆ ನೆರವೇರಿಸಿದ್ದರು.
2014ರಲ್ಲಿ 8500 ಕೋಟಿ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಯೋಜನೆಯ ವೆಚ್ಚ ಇದೀಗ 23, 251 ಕೋಟಿ ರೂ.ಗೆ ಮುಟ್ಟಿದೆ. ಒಟ್ಟು 8 ಪೈಪ್ಲೈನ್ ಮೂಲಕ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಬಳಿ ಬಂದು ಸೇರುವ ನೀರು 261 ಕಿಲೋಮೀಟರ್ ಹರಿದು ದೊಡ್ಡಬಳ್ಳಾಪುರದ ಸಮನಾಂತರ ಜಲಾಶಯ ಸೇರಿ ಅಲ್ಲಿಂದ ಕುಡಿಯುವ ನೀರು ಹಾಗೂ ಕೆರೆ ತುಂಬಿಸಲು ಬಳಕೆ ಆಗಲಿದೆ.
261 ಕಿಲೋಮೀಟರ್ ಪೈಕಿ 162 ಕಿಲೋಮೀಟರ್ ಕೆಲಸ ಸಂಪೂರ್ಣ ಮುಗಿದಿದೆ. 25 ಕಿಲೋಮೀಟರ್ ಕೆಲಸ ಪ್ರಗತಿಯಲ್ಲಿದೆ. ಇನ್ನುಳಿದ 50 ಕಿಲೋಮೀಟರ್ ಪೈಕಿ 19 ಕಿಲೋಮೀಟರ್ ಅರಣ್ಯ ಪ್ರದೇಶದಲ್ಲಿ ಕಾಲುವೆ ಆಗಬೇಕಿದ್ದು, ಅದರ ಕಾಮಗಾರಿ ಕೂಡ ನಡೆಯುತ್ತಿದೆಯಂತೆ. ಮಳೆಗಾಲ ಆರಂಭವಾಗುವ ಜೂನ್ 1 ರಿಂದ ಅಕ್ಟೋಬರ್ 31ರ ವರೆಗೆ ಒಟ್ಟು 139 ದಿನಗಳು ನಿತ್ಯ 1500 ಕ್ಯುಸೆಕ್ ನೀರಿನಂತೆ 24 ಟಿಎಂಸಿ ನೀರು ಹರಿಸಲು ಉದ್ದೇಶಿಸಲಾಗಿದೆ.
ಈ ವರ್ಷ ಹಾಸನ ಜಿಲ್ಲೆಯ ಒಳಗೆ 42 ಕಿಲೋಮೀಟರ್ವರೆಗೂ ಕಾಮಗಾರಿ ಸಂಪೂರ್ಣ ಮುಗಿದಿದೆ. ಆದರೆ, ಬೇಲೂರು ತಾಲೂಕಿನ ಐದಳ್ಳ ಕಾವಲು ಬಳಿ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ಆಗದ ಕಾರಣ 32ನೇ ಕಿಲೋ ಮೀಟರ್ನಲ್ಲಿ ನೀರನ್ನು ಹಳೆಬೀಡು ಕರೆಯತ್ತ ತಿರುಗಿಸಿ, ಅಲ್ಲಿಂದ ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಕೆರೆಯತ್ತ ಹರಿಸಿ, ವೇದಾವತಿ ನದಿ ಮೂಲಕ 132 ಕಿಲೋ ಮೀಟರ್ ದೂರದ ವಾಣಿ ವಿಲಾಸ ಸಾಗರಕ್ಕೆ ಹರಿಸಲಾಗುತ್ತಿದೆ. ಇಂದು ಚಾಲನೆ ನೀಡಿದ ದಿನದಿಂದ ಒಟ್ಟು 60 ದಿನ ನಿರಂತರವಾಗಿ ಸುಮಾರು 5 ಟಿಎಂಸಿ ನೀರನ್ನು ವಾಣಿ ವಿಲಾಸ ಸಾಗರಕ್ಕೆ ಹರಿಸುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯಿಂದ ಮುಖ್ಯವಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಜನರಿಗೆ ಪ್ರಯೋಜನವಾಗಲಿದೆ.
ಚಾಲನೆಗೂ ಮುನ್ನ ಪೂಜೆ-ಪೂರ್ಣಾಹುತಿ ಹೋಮ- ಎತ್ತಿನಹೊಳೆಗೆ ಬಾಗಿನ ಅರ್ಪಣೆ : ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುವ ಮೊದಲು ಪೂಜೆ ಸಲ್ಲಿಸಿದರು, ನಂತರ ಗೌರಿ ಪೂಜೆ ನೆರವೇರಿಸಿದರು. ದೊಡ್ಡನಾಗರ ಬಳಿ ನಡೆದ ಪೂರ್ಣಾಹುತಿ ಹೋಮ ಕಾರ್ಯಕ್ರಮದಲ್ಲಿ ಡಿಸಿಎಂ ಡಿ. ಕೆ ಶಿವಕುಮಾರ್ ಭಾಗಿಯಾದರು. 9 ಪೂರ್ಣಾಹುತಿ ಕುಂಭಗಳಿಗೆ ಬಿಲ್ವ ಪತ್ರೆ ಹಿಡಿದು ಪೂಜೆ ಸಲ್ಲಿಸಿದರಲ್ಲದೇ ಭಕ್ತಿ ಭಾವರಿಂದ ಪೂಜೆ ನೆರವೇರಿಸಿದರು. ಇದೇ ವೇಳೆ ಗಣಪತಿ, ವಾಸ್ತು, ಮೃತ್ಯುಂಜಯ, ನವಗ್ರಹ ಹೋಮಗಳನ್ನು ನೆರವೇರಿಸಿದರು. ಮೈಸೂರಿನ ಚಾಮುಂಡಿ ಬೆಟ್ಟದ ಶಶಿಶೇಖರ್ ದೀಕ್ಷಿತ್ ಹೋಮ ನಡೆಸಿಕೊಟ್ಟರು.
ವಾಹನದ ಬ್ರೇಕ್ ಫೇಲ್ – ಕೆಲ ಪತ್ರಕರ್ತರಿಗೆ ಗಾಯ : ಎತ್ತಿನಹೊಳೆ ಯೋಜನೆಯ ವರದಿಗಾಗಿ ತೆರಳುತ್ತಿದ್ದ ಪತ್ರಕರ್ತರ ವಾರ್ತಾ ಇಲಾಖೆಯ ವಾಹನದ ಬ್ರೇಕ್ ಫೇಲ್ಯೂರ್ ಆಗಿದೆ. ಪರಿಣಾಮ ವಾಹನ ಚಲಿಸುತ್ತಿದ್ದ ಲಾರಿಗೆ ಡಿಕ್ಕಿಹೊಡೆದು 7 ಮಂದಿ ಗಾಯಗೊಂಡಿದ್ದಾರೆ. ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ಘಟನೆ ಸಂಭವಿಸಿದೆ. ಬ್ರೇಕ್ ಫೇಲ್ಯೂರ್ ಕಾರಣ ವಾಹನ ಲಾರಿಗೆ ಡಿಕ್ಕಿಯಾಗಿರುವುದು ತಿಳಿದು ಬಂದಿದೆ. ಅಪಘಾತದಲ್ಲಿ ಏಳು ಮಂದಿ ಪತ್ರಕರ್ತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ : ಎತ್ತಿನಹೊಳೆ ಮೊದಲ ಹಂತ ಇಂದು ಲೋಕಾರ್ಪಣೆ: 2018-2023 ವರೆಗಿನ ನೀರಿನ ಲಭ್ಯತೆ ಅಂಕಿಅಂಶ - Yettinahole Project