ಮಂಡ್ಯ: ಕಾಂಗ್ರೆಸ್ ಸರ್ಕಾರ ಮೂಲಭೂತ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಾ ಬಂದಿದ್ದು, ಕೊಟ್ಟ ಭರವಸೆಯಂತೆ ಕೆಲಸ ಮಾಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷಿ ಕಾವೇರಿ 5ನೇ ಹಂತದ ಯೋಜನೆಗೆ ಜಿಲ್ಲೆಯ ಮಳವಳ್ಳಿಯ ಟಿ.ಕೆ.ಹಳ್ಳಿಯ ಬೆಂಗಳೂರು ಜಲಮಂಡಳಿ ಜಲಶುದ್ದೀಕರಣ ಘಟಕದಲ್ಲಿ ಇಂದು ಬಟನ್ ಒತ್ತುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕಾಂಗ್ರೆಸ್ ಸುಳ್ಳು ಹೇಳಲ್ಲ. ಕೊಟ್ಟ ಮಾತು ಮರೆಯಲ್ಲ. ಕೊಟ್ಟ ಭರವಸೆಯಂತೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಿಎಂ ಕೊಂಡಾಡಿದರು.
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಈ ಹಳ್ಳಿಗಳನ್ನು ಬೆಂಗಳೂರು ನಗರಕ್ಕೆ ಸೇರಿಸಲಾಗುತ್ತು. ಆದರೆ, ಆಗ ಅವರು ಹಳ್ಳಿಗಳಿಗೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಲಿಲ್ಲ. ನಂತರ ಬಂದ ಬಿಜೆಪಿ ಕೂಡ ಪ್ರಯತ್ನಿಸಲಿಲ್ಲ. ಹೀಗಾಗಿ ಈ ಯೋಜನೆ ವಿಳಂಬವಾಯಿತು. 6ನೇ ಹಂತ ಮಾಡಲು ಕೂಡಾ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಸಂಪೂರ್ಣ ಬೆಂಗಳೂರಿಗೆ ನೀರು ಪೂರೈಸುವುದು ನಮ್ಮ ಉದ್ದೇಶ. 6ನೇ ಹಂತಕ್ಕೆ ಸುಮಾರು 7,200 ಕೋಟಿ ರೂ ಅನುದಾನದ ಅವಶ್ಯಕತೆ ಇದೆ. ಆ ಹಣಕಾಸಿನ ನೆರವು ಪಡೆದು ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಹಿಂದೆ ಕಾವೇರಿ 5ನೇ ಹಂತದ ಯೋಜನೆಗೆ ಸಿದ್ದರಾಮಯ್ಯ ಚಾಲನೆ ಕೊಟ್ಟಿದ್ದರು. ಈಗ ಅವರೇ ಉದ್ಘಾಟನೆ ಮಾಡಿದ್ದಾರೆ. ಇದು ನಮ್ಮ ಪುಣ್ಯ. ಎತ್ತಿನ ಹೊಳೆ ಯೋಜನೆ ಸಾಧ್ಯನಾ ಎಂದು ಕುಮಾರಸ್ವಾಮಿ ಸೇರಿ ಹಲವರು ಟೀಕೆ ಮಾಡಿದ್ದರು. ಈಗ ಟೀಕೆಗಳು ಸತ್ತಿದ್ದು ಕೆಲಸಗಳು ಬದುಕಿವೆ. ಸಿಎಂ ನೇತೃತ್ವದಲ್ಲಿಯೇ ಮೇಕೆದಾಟು ಯೋಜನೆಗೂ ಚಾಲನೆ ನೀಡುತ್ತೇವೆ. ನಾವು ಪರಿಶುದ್ಧವಾದ ಆಡಳಿತ ಮಾಡುತ್ತಿದ್ದೇವೆ. ಆದರೆ, ಹಣ್ಣು ಚೆನ್ನಾಗಿದ್ದರೆ ಕಲ್ಲು ಹೊಡೆಯುತ್ತಾರೆ. ಕಲ್ಲು ಹೊಡೆಯೋರಿಗೆ ನಾವು ತಲೆಕೆಡಿಸಿಕೊಳ್ಳಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ ಬೆಂಗಳೂರಿನ ಮಳೆ ಅವಾಂತರದ ಬಗ್ಗೆ ಮಾತನಾಡಿ, ಎಷ್ಟೇ ಮಳೆ ಬಂದರೂ ತಡೆದುಕೊಳ್ಳುವ ಶಕ್ತಿ ನಮಗಿದೆ. ನಾವು ಎಲ್ಲದಕ್ಕೂ ಸಿದ್ದತೆ ಮಾಡಿಕೊಂಡಿದ್ದೇವೆ. ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಬೆಂಗಳೂರಿಗೆ ಹೋದ ತಕ್ಷಣ ಮತ್ತೊಮ್ಮೆ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಲಾಗುತ್ತದೆ ಎಂದರು.
ಯೋಜನೆಗೆ ಚಾಲನೆ ನೀಡುವ ಮುನ್ನ ಬೆಂಗಳೂರು ಜಲಮಂಡಳಿಯ ಆವರಣದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಈ ಯೋಜನೆಯ ಚಾಲನೆ ಕುರಿತು ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಪೂಜೆ ಮುಗಿದ ನಂತರ ಕೊನೆಯಲ್ಲಿ ಬಂದು ಮಂಗಳಾರತಿ ಪಡೆಯುವಂತೆ ಕಾವೇರಿ-5ನೇ ಕಾಮಗಾರಿ ಮುಗಿದ ಬಳಿಕ ಕಾಂಗ್ರೆಸ್ ಮುಂದೆ ಬಂದು ಹೆಸರು ಪಡೆದುಕೊಳ್ಳುತ್ತಿದೆ. ಈ ಯೋಜನೆ ಮಾಡಿದ್ದು ಬಿಜೆಪಿ ಎಂದು ಗೊತ್ತಿದ್ದರೂ, ನಾವೇ ಮಾಡಿದ್ದೆಂದು ಡಿ.ಕೆ.ಶಿವಕುಮಾರ್ ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
2018ರ ಜನವರಿ 24ರಂದು ಈ ಯೋಜನೆಗೆ 5,500 ಕೋಟಿ ರೂ. ಸಾಲ ಪಡೆಯಲು ಅಂದಿನ ಬಿಜೆಪಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆಗ ಕಾಮಗಾರಿಗೆ 90 ತಿಂಗಳ ಗಡುವು ವಿಧಿಸಲಾಗಿತ್ತು. ಜೊತೆಗೆ ಕಾಮಗಾರಿ ನಡೆಸುವ ಸಂಸ್ಥೆಗಳನ್ನೂ ನಿಗದಿಪಡಿಸಲಾಗಿತ್ತು. 2019ರ ಜನವರಿ 1ರಂದು ಯೋಜನೆಯ ಕಾಮಗಾರಿ ಆರಂಭವಾಗಿತ್ತು. ಆಗಲೂ ಬಿಜೆಪಿ ಸರ್ಕಾರವೇ ಇತ್ತು. ಪ್ಯಾಕೇಜ್ 2ನಲ್ಲಿ ನಿತ್ಯ 77.5 ಕೋಟಿ ಲೀಟರ್ ನೀರು ಶುದ್ಧೀಕರಣ ಘಟಕ, ಪ್ಯಾಕೇಜ್ 3ರಲ್ಲಿ ಟಿ.ಕೆ.ಹಳ್ಳಿ ಪಂಪಿಂಗ್ ಘಟಕ, ಪ್ಯಾಕೇಜ್ 4ರಲ್ಲಿ ಹಾರೋಹಳ್ಳಿ ಹಾಗೂ ತಾತಗುಣಿಯಲ್ಲಿ ಎರಡು ಪಂಪಿಂಗ್ ಸ್ಟೇಶನ್, ಪ್ಯಾಕೇಜ್ 7ರಲ್ಲಿ ಟಿ.ಕೆ.ಹಳ್ಳಿ-ಹಾರೋಹಳ್ಳಿ ಪೈಪ್‌ಲೈನ್, ಪ್ಯಾಕೇಜ್ 8ರಲ್ಲಿ ಹಾರೋಹಳ್ಳಿ-ವಾಜರಹಳ್ಳಿ ಪೈಪ್‌ಲೈನ್, ಪ್ಯಾಕೇಜ್ 10ರಲ್ಲಿ ಪಶ್ಚಿಮ ಭಾಗದಲ್ಲಿ ಪೈಪ್‌ಲೈನ್, ಪ್ಯಾಕೇಜ್ 12ರಲ್ಲಿ ಪೂರ್ವ ಭಾಗದಲ್ಲಿ ನೆಲಮಟ್ಟದ ಜಲಾಗಾರ, ಪ್ಯಾಕೇಜ್ 13ರಲ್ಲಿ ಪಶ್ಚಿಮ ಭಾಗದಲ್ಲಿ ನೆಲಮಟ್ಟದ ಜಲಾಗಾರ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು ಎಂದು ಕೆಲವು ಅಂಕಿ-ಸಂಖ್ಯೆಗಳನ್ನು ನೀಡಿದರು.
ಇದನ್ನೂ ಓದಿ: ಮಳೆ ನೀರನ್ನು ವಾಪಸ್ ಆಕಾಶಕ್ಕೆ ಕಳಿಸಲಾಗುವುದಿಲ್ಲ, ಭೂಮಿ ಮೇಲೆನೇ ಹರಿಯಬೇಕು: ಸಚಿವ ಜಿ.ಪರಮೇಶ್ವರ್