ಶಿವಮೊಗ್ಗ/ಬೆಂಗಳೂರು: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು ಬೆಂಗಳೂರಿನ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ 25 ಲಕ್ಷ ರೂಪಾಯಿಯ ಪರಿಹಾರ ಚೆಕ್ ವಿತರಿಸಿದರು.
ಈ ವೇಳೆ ಚಂದ್ರಶೇಖರ್ ಪತ್ನಿ, ಪುತ್ರರು ಪರಿಹಾರದ ಚೆಕ್ ಪಡೆದು ಸಿಎಂ ಅವರ ಆಶೀರ್ವಾದ ಪಡೆದರು. ಈ ಸಂದರ್ಭ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗ ಶಾಸಕ ಎಸ್. ಎನ್ ಚನ್ನಬಸಪ್ಪ, ಭೋವಿ ಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ, ರಾಜ್ಯ ಭೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್, ಚಂದ್ರಶೇಖರ್ ಕುಟುಂಬದ ಬಂಧು ಭೂಪಾಲ್ ಮತ್ತಿತರರು ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು, ಚಂದ್ರಶೇಖರ್ ಆತ್ಮಹತ್ಯೆ ದುರದೃಷ್ಟಕರ ಘಟನೆಯಾಗಿದೆ. ಸರ್ಕಾರ ಅವರ ಕುಟುಂಬದ ನೋವಿಗೆ ಸ್ಪಂದಿಸಿದೆ ಮತ್ತು ಅವರ ಕುಟುಂಬದ ಜೊತೆಗೆ ಇರಲಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು, ಚಂದ್ರಶೇಖರ್ ಕುಟುಂಬದ ಜತೆಗೆ ನಿಲ್ಲುವೆ ಎಂದರು. ಚಂದ್ರಶೇಖರ್ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, ಯಾವುದೇ ಮನೆಯಲ್ಲಿ ಸಾವಾಗಬಾರದು. ಆದ ದುರ್ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವುದು ನಾಗರಿಕ ಸಮಾಜದ ಕರ್ತವ್ಯ. ನಿಮ್ಮ ಕುಟುಂಬಕ್ಕೆ ಸರ್ಕಾರ ನೀಡಿದ ಭರವಸೆಯಂತೆ ನಡೆದುಕೊಂಡಿದೆ ಎಂದರು.
ಸಾಂತ್ವನ ಹೇಳಲು ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಿಹಾರ ಕೊಡಿಸುವಂತೆ ಭರವಸೆ ನೀಡಿದ್ದೆ. ಅದರಂತೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಪರಿಹಾರ ನೀಡಲಾಗಿದೆ. ಸರ್ಕಾರ ಕೊಟ್ಟ ಹಣ ಅಪವ್ಯಯವಾಗದಂತೆ ನೋಡಿಕೊಳ್ಳಿ. ಮಕ್ಕಳ ಭವಿಷ್ಯಕ್ಕೆ ಒಂದು ಮಾರ್ಗ ತೋರಿಸಿ ಎಂದು ಸಿಎಂ ಸಲಹೆ ನೀಡಿದರು.
ಇದನ್ನೂ ಓದಿ : ವಾಲ್ಮೀಕಿ ನಿಗಮ ಹಗರಣ: ಚಂದ್ರಶೇಖರನ್ ಕುಟುಂಬಕ್ಕೆ ಮತ್ತೆ 5 ಲಕ್ಷ ನೀಡಿದ ರಾಷ್ಟ್ರಭಕ್ತ ಬಳಗ - Valmiki Corporation Scam