ಬೆಂಗಳೂರು: ''ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆಗೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೇರ ಹೊಣೆ ಹೊರಬೇಕು'' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ''ಎಲ್ಲವನ್ನೂ ಸಚಿವ ನಾಗೇಂದ್ರ ಅವರ ತಲೆಗೆ ಕಟ್ಟುವ ಷಡ್ಯಂತ್ರ ನಡೆಯುತ್ತಿದೆ. ಇಡೀ ಅಕ್ರಮದಲ್ಲಿ ಸರ್ಕಾರದ ಇಡೀ ಸಂಪುಟವೇ ಭಾಗಿಯಾಗಿರುವ ಅನುಮಾನವಿದೆ. ಹೀಗಾಗಿ ಎಲ್ಲಾ ನಿಗಮ ಮಂಡಳಿಗಳಲ್ಲಿರುವ ಹಣದ ಬಗ್ಗೆ ಜನರಿಗೆ ಲೆಕ್ಕ ಕೊಡಬೇಕು'' ಎಂದು ಒತ್ತಾಯಿಸಿದರು.
''ನಿಗಮದ ಹಣ ಹಲವು ನಕಲಿ ಖಾತೆಗಳಿಗೆ ವರ್ಗಾವಣೆಯಾಗಿದೆ. ಈ ಬಗ್ಗೆ ದಾಖಲೆಗಳೇ ಬಹಿರಂಗವಾಗಿವೆ. ಕೇವಲ ತೆಲಂಗಾಣಕ್ಕೆ ಮಾತ್ರ ಈ ಹಣ ಯಾಕೆ ಹೋಯಿತು? ಯಾರು ವರ್ಗಾವಣೆ ಮಾಡಿಸಿದರು? ಇಲ್ಲಿ ಯೂನಿಯನ್ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾದ ಕೆಲ ಹೊತ್ತಿನಲ್ಲಿ ನಕಲಿ ಬ್ಯಾಂಕ್ ಖಾತೆಗಳಿಂದ ರಾಕೆಟ್ ವೇಗದಲ್ಲಿ ಅಷ್ಟೂ ಹಣವನ್ನು ಡ್ರಾ ಮಾಡಲಾಗಿದೆ. ಇದು ಬಹುದೊಡ್ಡ ಅಕ್ರಮ. ಇದರಲ್ಲಿ ಸಿಎಂ ಸೇರಿದಂತೆ ಇಡೀ ಸಂಪುಟವೇ ಶಾಮೀಲಾಗಿದೆ'' ಎಂದು ನೇರ ಆರೋಪ ಮಾಡಿದರು.
''ಕೇವಲ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಮಾತ್ರ ಹಣ ವರ್ಗಾವಣೆಯಾಗಿರಲು ಸಾಧ್ಯವಿಲ್ಲ. ಬೇರೆ ಬೇರೆ ಇಲಾಖೆಗಳ ನಿಗಮ ಮಂಡಳಿಗಳ ಖಾತೆಗಳಿಂದಲೂ ವರ್ಗಾವಣೆಯಾಗಿರುವ ಸಾಧ್ಯತೆ ಇದೆ. ತೆಲಂಗಾಣ ಚುನಾವಣೆಗೆ ರಾಜ್ಯದಿಂದ ಯಾರೆಲ್ಲ ಉಸ್ತುವಾರಿಗಳಿದ್ದರು ಎಂಬುದನ್ನೆಲ್ಲ ಗಮನಿಸಬೇಕು'' ಎಂದು ಹೇಳಿದರು.
ನಿಗಮ, ಮಂಡಳಿಗಳ ವ್ಯವಹಾರದ ಬಗ್ಗೆ ತನಿಖೆಯಾಗಲಿ: ''ಈ ಹಗರಣಕ್ಕೆ ಸಂಬಂಧಿಸಿ 14 ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಆ ಖಾತೆಗಳನ್ನು ತೆರೆದವರು ಯಾರು? ಯಾವೆಲ್ಲ ಕಾಣದ ಕೈಗಳು ಇವುಗಳ ಹಿಂದೆ ಇವೆ ಎಂಬುದು ಎಲ್ಲವೂ ಹೊರಬರಬೇಕಲ್ಲವೇ? ಈ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಎನ್ನುವುದು ಇದೆಯೇ? ಎಲ್ಲಾ ನಿಗಮ-ಮಂಡಳಿಗಳ ಹಣದ ವ್ಯವಹಾರದ ಬಗ್ಗೆ ತನಿಖೆ ನಡೆಯಲಿ. ತನಿಖೆ ನಡೆದರೆ ಇನ್ನೆಷ್ಟು ಅಕ್ರಮಗಳು ಹೊರಗೆ ಬರುತ್ತವೋ ಗೊತ್ತಿಲ್ಲ'' ಎಂದರು.
ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿಗೆ ಎಟಿಎಂ ಮೂಲಕ ಪಾಲು ಹೋಗಿದೆ: ಆರ್.ಅಶೋಕ್ - R Ashok