ಬೆಳಗಾವಿ: "ಹಿಂದಿನ ಯಾವೊಬ್ಬ ಮುಖ್ಯಮಂತ್ರಿಯೂ ಈ ರೀತಿ ಮಾಡಿರಲಿಲ್ಲ. ಸಿದ್ದರಾಮಯ್ಯ ಬಗ್ಗೆ ಬಹಳಷ್ಟು ಅಭಿಮಾನವಿತ್ತು. ಲಿಂಗಾಯತರ ಮೇಲೆ ಹಲ್ಲೆ ಮಾಡಿದ ಅಪಖ್ಯಾತಿಗೆ ಈ ಸರ್ಕಾರ ಗುರಿಯಾಗಿದೆ. ಕೂಡಲೇ ಮುಖ್ಯಮಂತ್ರಿಗಳು ಕ್ಷಮೆ ಕೇಳಬೇಕು" ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕಳೆದ ನಾಲ್ಕು ವರ್ಷಗಳಿಂದ ಶಾಂತ ರೀತಿಯಿಂದ ಹೋರಾಟ ಮಾಡಲಾಗಿತ್ತು. ಎಂದಿಗೂ ನಮ್ಮ ಜನ ಅಶಾಂತಿಗೆ ಅವಕಾಶ ಕೊಟ್ಟಿಲ್ಲ. ಕಳೆದ ವರ್ಷ 12 ಜಿಲ್ಲೆಯಲ್ಲಿ ಹೋರಾಟ ಮಾಡಿದಾಗ ಯಾವುದೇ ಸಮಸ್ಯೆ ಆಗಿರಲಿಲ್ಲ. ಸಿಎಂ ಸಿದ್ದರಾಮಯ್ಯ ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಹಾಗಾಗಿ, ಸುವರ್ಣಸೌಧದ ಬಳಿ ನ್ಯಾಯ ಕೇಳಬೇಕು ಎಂದು ಉಗ್ರ ಹೋರಾಟಕ್ಕೆ ಇಳಿದೆವು. ನಮ್ಮ ಪದಾಧಿಕಾರಿಗಳಿಗೆ ಪೊಲೀಸ್ ಇಲಾಖೆಯಿಂದ ನಿರಂತರ ಬೆದರಿಕೆ ಹಾಕಲಾಗಿದೆ" ಎಂದು ದೂರಿದರು.
"ರ್‍ಯಾಲಿಗೆ ಬರುವ ಟ್ರ್ಯಾಕ್ಟರ್ಗಳಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದರು. ಆ ಬಳಿಕ ಕೊಂಡಸಕೊಪ್ಪ ಬಳಿ ಸಮಾವೇಶ ಮಾಡಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಲು ನಿರ್ಧರಿಸಿದೆವು. ಆಗ ಸರ್ಕಾರದ ಪರವಾಗಿ ಆಗಮಿಸಿದ ಸಚಿವರಾದ ಹೆಚ್.ಸಿ.ಮಹಾದೇವಪ್ಪ, ಡಾ.ಎಂ.ಸಿ.ಸುಧಾಕರ್, ಕೆ.ವೆಂಕಟೇಶ್ ನಿಮ್ಮ ಅಭಿಪ್ರಾಯ ಕೇಳಲು ಬಂದಿದ್ದೇವೆ ಅಂತ ಅಷ್ಟೇ ಹೇಳಿದರು. ಮಹಾದೇವಪ್ಪನವರು 10 ಜನ ಬನ್ನಿ ಅಂತ ಆಗ ಹೇಳಿದ್ದರೆ, ನಾವಷ್ಟೇ ಹೋಗುತ್ತಿದ್ದೆವು. ಆದರೆ, ಲಾಠಿ ಚಾರ್ಜ್ಗೂ ಮೊದಲೇ 10 ಜನರನ್ನು ಕರೆದಿದ್ದೆ ಎಂದು ಸಿಎಂ ಸುಳ್ಳು ಹೇಳುತ್ತಿದ್ದಾರೆ" ಎಂದು ದೂರಿದರು.
"ಸಿಎಂ ಸಿದ್ದರಾಮಯ್ಯ ಅವರೇ ಸ್ಥಳಕ್ಕೆ ಬರಬೇಕು ಎಂದು ಸಮುದಾಯದ ಜನರು ಪಟ್ಟು ಹಿಡಿದರು. ಸಿಎಂ ಬರುವುದಿಲ್ಲ ಎಂದು ಎಡಿಜಿಪಿ ಹೇಳಿದರು. ಹಾಗಾಗಿ, ಸಿಎಂ ಇದ್ದ ಜಾಗಕ್ಕೆ ನಾವೇ ಹೋಗೋಣ ಎಂದು ತೀರ್ಮಾನಿಸಿ ಹೊರಟೆವು. ಹೀಗೆ ಹೋಗುವಾಗಲೂ 10 ಜನರನ್ನು ಸಿಎಂ ಆಹ್ವಾನಿಸಿದ್ದಾರೆ ಅಂತ ಯಾವ ಅಧಿಕಾರಿಯೂ ನಮ್ಮ ಮುಂದೆ ಹೇಳಿಲ್ಲ. ಇನ್ನು ಸಿವಿಲ್ ಬಟ್ಟೆಯಲ್ಲಿ ಇದ್ದ ಕೆಲ ಪೊಲೀಸರು ನಮ್ಮವರ ಮೇಲೆ ಕಲ್ಲು ತೂರಿದ್ದಾರೆ. ಪೊಲೀಸರು ದ್ವೇಷದಿಂದ ಮಾರಣಾಂತಿಕ ಹಲ್ಲೆ ಮಾಡಿದರು. ವಕೀಲರ ಮೇಲೂ ಹಲ್ಲೆ ಮಾಡಿದ್ದಾರೆ" ಎಂದು ಹೇಳಿದರು.
ಸೋಮವಾರದಿಂದ ಧರಣಿ ಸತ್ಯಾಗ್ರಹ: "ಲಾಠಿ ಚಾರ್ಜ್ ಮಾಡಿಸಿದ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದೇ ರೀತಿ ರೈತರ ಮೇಲಿನ ಕೇಸ್ಗಳನ್ನು ವಾಪಸ್ ಪಡೆಯಬೇಕು. ಗುರುವಾರ ರಾಜ್ಯಾದ್ಯಂತ ಜಿಲ್ಲಾ ಕೇಂದ್ರ, ತಾಲೂಕುಗಳಲ್ಲಿ ಮತ್ತು ಹಿರೇಬಾಗೇವಾಡಿ ಹಾಗೂ ಹತ್ತರಗಿ ಟೋಲ್ ನಾಕಾಗಳನ್ನು ಬಂದ್ ಮಾಡಿ ಪ್ರತಿಭಟಿಸುತ್ತೇವೆ. ಸೋಮವಾರದಿಂದ ಕೊಂಡಸಕೊಪ್ಪ ಪ್ರತಿಭಟನೆ ವೇದಿಕೆಯಲ್ಲಿ ಬೆಳಿಗ್ಗೆ 10ರಿಂದ ಸಾಯಂಕಾಲ 6 ಗಂಟೆವರೆಗೆ ಧರಣಿ ಸತ್ಯಾಗ್ರಹ ಮಾಡುತ್ತೇವೆ" ಎಂದು ತಿಳಿಸಿದರು.
ಹಿಂದುಳಿದ ವರ್ಗದ ಸಮುದಾಯದ ಮುಖಂಡರು ಪಂಚಮಸಾಲಿಗರಿಗೆ 2ಎ ಮೀಸಲಾತಿ ಕೊಡಬಾರದು ಎಂದು ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿರುವ ಕುರಿತು ಮಾತನಾಡಿ, "ಸಿದ್ದರಾಮಯ್ಯ ಜಾಣ ಮುಖ್ಯಮಂತ್ರಿ. ಹಾಗಾಗಿ, ಪಂಚಮಸಾಲಿಗೆ ಮೀಸಲಾತಿ ಕೊಡಬೇಡಿ ಎಂದು ತಾವೇ ಮನವಿ ತರಿಸಿಕೊಂಡಿದ್ದಾರೆ" ಎಂದು ಆರೋಪಿಸಿದರು.
ಇದನ್ನೂ ಓದಿ: 'ಪಂಚಮಸಾಲಿಗರಿಗೆ 2ಎ ಮೀಸಲಾತಿ ನೀಡಬಾರದು': ಸಿಎಂಗೆ ಹಿಂದುಳಿದ ಜಾತಿಗಳ ಒಕ್ಕೂಟದ ಮನವಿ