ಶಿರಸಿ (ಉತ್ತರ ಕನ್ನಡ) : ವಾಲ್ಮೀಕಿ ನಿಗಮದಲ್ಲಿ ನಡೆದ ಘನಘೋರ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಶಾಮೀಲಾಗಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿ, ನಿಗಮದ ಅಧಿಕಾರಿಗಳನ್ನು ಮತ್ತು ಸಚಿವ ನಾಗೇಂದ್ರ ಅವರನ್ನು ಬಂಧಿಸಿ, ವಿಚಾರಣೆ ನಡೆಸಬೇಕು. ನಡೆದ ಹಗರಣದ ಕುರಿತ ವಿಷಯ ಹೊರ ಬರಬೇಕಾಗಿದೆ. ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದ್ದು, ಗರಿಷ್ಠ ಶಿಕ್ಷೆಯಾಗುವಂತೆ ರಾಜ್ಯ ಸರ್ಕಾರ ದಿಟ್ಟ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಹೊಂದಾಣಿಕೆ, ವೋಟ್ ಬ್ಯಾಂಕ್ ರಾಜಕಾರಣದಿಂದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಲು ಬಿಟ್ಟಿರುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೃಪಾಕಟಾಕ್ಷದಿಂದ ಪ್ರಜ್ವಲ್ ವಿದೇಶಕ್ಕೆ ತೆರಳಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಗೆಲ್ಲುತ್ತದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗುತ್ತಾರೆ. ಸಟ್ಟಾ ಬಜಾರ್ ಬಗ್ಗೆ ನಾನು ಹೇಳುವುದಿಲ್ಲ. ಅದೇ ಸಟ್ಟಾ ಬಜಾರ್ 407, 360, 350 ಸ್ಥಾನಗಳ ಭವಿಷ್ಯ ನೀಡಿದೆ. ನಮಗೆ ವಿಶ್ವಾಸವಿದ್ದು, ಪ್ರಚಂಡ ಬಹುಮತದಿಂದ ಬಿಜೆಪಿಯು ಐತಿಹಾಸಿಕ ವಿಜಯ ಸಾಧಿಸಲಿದೆ. ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಯು ಪರಿಣಾಮ ಬೀರಿಲ್ಲ ಎಂದರು.
ಗ್ಯಾರಂಟಿ ಯೋಜನೆಗೆ ಹಣ ಹೊಂದಾಣಿಕೆ ಮಾಡಲು ಸ್ಟಾಂಪ್ ಪೇಪರ್ ದರ ಹೆಚ್ಚಳ ಸೇರಿದಂತೆ ಅನೇಕ ವಸ್ತುಗಳ ದರ ಏರಿಕೆ ಮಾಡಿದ್ದಾರೆ. ಬಸ್ ಸಂಚಾರ ಮಾರ್ಗ ಕಡಿತಗೊಳಿಸಿದ್ದು, ಬಸ್‌ಗೆ ಡೀಸೆಲ್ ಹಾಕಲು ಹಣವಿಲ್ಲದ ಕಾರಣ ರಸ್ತೆಯ ಮೇಲೆ ಬಸ್‌ಗಳು ನಿಲ್ಲುತ್ತಿವೆ. ಯುವಕರಿಗೆ ಯುವ ನಿಧಿ ಬಂದಿಲ್ಲ. ಚುನಾವಣೆಗಾಗಿ ಗ್ಯಾರಂಟಿ ಮಾಡಿದ್ದು, ಚುನಾವಣೆ ಮುಗಿದ ಬಳಿಕ ಗ್ಯಾರಂಟಿ ಹೋಗುತ್ತದೆ. ಕಾಂಗ್ರೆಸ್ ಪಕ್ಷವನ್ನು ಜನಸಾಮಾನ್ಯರು ನಂಬುವುದಿಲ್ಲ ಎಂದ ಅವರು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ರಾಜ್ಯದಲ್ಲಿ 24ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ರಾಜ್ಯ ಸರ್ಕಾರದ ಭ್ರಷ್ಟಾಚಾರ ಬಹಿರಂಗ ಮಾಡಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವ: ಕೆ ಎಸ್ ಈಶ್ವರಪ್ಪ - KS Eshwarappa