ETV Bharat / state

ಶಾಸಕರು, ಮಂತ್ರಿಗಳೊಂದಿಗೆ ವಿಡಿಯೋ ಸಂವಾದ: ಒಗ್ಗಟ್ಟಿನಿಂದ ಕೆಲಸ ಮಾಡಿ, ಮೂರೂ ಕ್ಷೇತ್ರ ಗೆಲ್ಲುವಂತೆ ಸಿಎಂ-ಡಿಸಿಎಂ ಸೂಚನೆ - CM DCM VIDEO INTERACTION

ಉಪ ಚುನಾವಣೆ ಹಿನ್ನೆಲೆಯಲ್ಲಿ ಮತ ಪ್ರಚಾರ, ಇನ್ನಿತರ ಕಾರ್ಯಗಳ ಕುರಿತಂತೆ ಶಾಸಕರು, ಮಂತ್ರಿಗಳ ಜೊತೆ ಸಿಎಂ ಹಾಗೂ ಡಿಸಿಎಂ ವಿಡಿಯೋ ಸಂವಾದ ನಡೆಸಿ ಸಲಹೆ, ಸೂಚನೆ ನೀಡಿದರು.

video interaction
ಸಿಎಂ-ಡಿಸಿಎಂ ವಿಡಿಯೋ ಸಂವಾದ (ETV Bharat)
author img

By ETV Bharat Karnataka Team

Published : Oct 27, 2024, 2:14 PM IST

ಬೆಂಗಳೂರು: ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ. ಉಪಸಮರದ ಮೂರೂ ಕ್ಷೇತ್ರಗಳಲ್ಲಿ ಜಯ ಗಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಶಾಸಕರು ಹಾಗೂ ಸಚಿವರಿಗೆ ಸಲಹೆ ನೀಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಸಂಬಂಧ ಮಂತ್ರಿಗಳು, ಶಾಸಕರು, ಎಂಎಲ್​ಸಿಗಳು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಮುಖಂಡರ ಜೊತೆ ವಿಡಿಯೋ ಸಂವಾದ ನಡೆಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ದೆಹಲಿಯಿಂದ ಪಾಲ್ಗೊಂಡರು. ಈ ವೇಳೆ ಸಿಎಂ ಸಿದ್ದರಾಮಯ್ಯ, ''ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಒಗ್ಗೂಡಿ ಶ್ರಮಿಸಬೇಕು'' ಎಂದು ಸೂಚನೆ ನೀಡಿದರು.

''ಸ್ಥಳೀಯ ಮಟ್ಟದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರನ್ನೂ ಒಗ್ಗೂಡಿಸಿ ಚುನಾವಣಾ ಪ್ರಚಾರ ನಡೆಸಬೇಕು. ನಮ್ಮದೇ ಸರ್ಕಾರ ಇದ್ದು, ಮೂರು ಕ್ಷೇತ್ರಗಳನ್ನು ಗೆಲ್ಲಲೇ ಬೇಕು. ಇಲ್ಲವಾದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸರ್ಕಾರದ ಪಂಚ ಗ್ಯಾರಂಟಿ, ಜನಪರ ಯೋಜನೆಗಳ ಬಗ್ಗೆ ಕ್ಷೇತ್ರದಲ್ಲಿ ಪ್ರಚಾರ ನಡೆಸಬೇಕು. ಯಾವುದೇ ಭಿನ್ನಮತ, ಅಸಮಾಧಾನ ಇದ್ದರೆ ಅದನ್ನು ಶಮನಗೊಳಿಸಿ ಕಾರ್ಯಕರ್ತರನ್ನು ಹುರಿದುಂಬಿಸಬೇಕು'' ಎಂದು ಸಲಹೆ ನೀಡಿದರು.

''ವಿಪಕ್ಷಗಳ ಭ್ರಷ್ಟಾಚಾರ ಆರೋಪ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಣ ದುರುಪಯೋಗ, ಮುಡಾ ಆರೋಪ ವಿರುದ್ಧ ಗಟ್ಟಿಯಾಗಿ ಕೌಂಟರ್ ನೀಡಿ, ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿ. ಉಸ್ತುವಾರಿ ಸಚಿವರು, ಶಾಸಕರು, ಮಾಜಿ ಶಾಸಕರು ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಬೇಕು'' ಎಂದು ಸೂಚನೆ ನೀಡಿದರು.

''ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ಉಪ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರು, ಸಂಸದರಿಗೆ ಜವಾಬ್ದಾರಿ‌ ನೀಡಲಾಗಿದೆ. ಪ್ರತಿ ಹೋಬಳಿಗೆ ಒಬ್ಬರಂತೆ ಸಚಿವರು, ಗ್ರಾಮ ಪಂಚಾಯತಿಗೆ ಶಾಸಕರು, ಸಂಸದರ ಹೋಗಿ ಮತಬೇಟೆ ನಡೆಸುವಂತೆ ಜವಾಬ್ದಾರಿ‌ ಹಂಚಿಕೆ ಮಾಡಲಾಗಿದೆ. ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಒಗ್ಗಟ್ಟಿನ ಪಣತೊಡಬೇಕು'' ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದರು.

ಮಂತ್ರಿಗಳ ಗೈರಿಗೆ ಸುರ್ಜೇವಾಲ ಗರಂ: ದೆಹಲಿಯಿಂದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಂತ್ರಿಗಳ ಗೈರಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಬಹುತೇಕ ಮಂತ್ರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಳ್ಳದ ಬಗ್ಗೆ ಆಕ್ಷೇಪ ಹೊರಹಾಕಿದರು. ಮೂರು ಕ್ಷೇತ್ರಗಳ ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಶಾಸಕರು ಹಾಗೂ ಸಚಿವರಿಗೆ ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್​ನವರಿಗೆ ಬಿಜೆಪಿ ಜೊತೆ ಹೊಂದಾಣಿಕೆ ಇದೆ : ಮಂಜುನಾಥ್ ಕುನ್ನೂರು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.