ಹುಬ್ಬಳ್ಳಿ: ಸಿಐಡಿ ಪೊಲೀಸರು ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ದೋಷಾರೋಪಣೆ ಪಟ್ಟಿಯನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಿದರು. ತನಿಖಾಧಿಕಾರಿಯಾದ ಸಿಐಡಿ ಡಿವೈಎಸ್ಪಿ ಎಂ.ಹೆಚ್.ಉಮೇಶ್, ಸುಮಾರು 494 ಪುಟಗಳ ದೋಷಾರೋಪಣೆ ಪಟ್ಟಿಯನ್ನು 3ನೇ ದಿವಾಣಿ ನ್ಯಾಯಾಲಯ ಮತ್ತು ಜೆಎಂಎಫ್ ಕೋರ್ಟ್ಗೆ ಸಲ್ಲಿಸಿದ್ದಾರೆ.
ಆರೋಪಿ ಗಿರೀಶ ಅಲಿಯಾಸ್ ವಿಶ್ವನಾಥ ಎಸ್.ಸಾವಂತ ಮೇ.15ರಂದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ ಅವರನ್ನು ಹತ್ಯೆಗೈದಿದ್ದ. ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ತನಿಖೆ ನಡೆಸಿದ ಸಿಐಡಿ ಸುಮಾರು 85 ಸಾಕ್ಷ್ಯಗಳನ್ನು ದೋಷಾರೋಪಣೆ ಪಟ್ಟಿಯಲ್ಲಿ ಸೇರಿಸಿದೆ. ಇದರಲ್ಲಿ ಸಿಸಿಟಿವಿ ದೃಶ್ಯಾವಳಿ, ಮರಣೋತ್ತರ ಪರೀಕ್ಷೆ ವರದಿ, ಎಫ್‌ಎಸ್ಎಲ್ ವರದಿ, ಮೊಬೈಲ್, ಹತ್ಯೆಗೆ ಬಳಸಿದ್ದ ಚಾಕು ಇತ್ಯಾದಿ ಸಾಕ್ಷ್ಯಗಳು ಅಡಕವಾಗಿವೆ ಎಂದು ತಿಳಿದು ಬಂದಿದೆ.
ಅಂಜಲಿ ಮೂರ್ನಾಲ್ಕು ಬಾರಿ ಮೈಸೂರಿಗೆ ಹೋಗಿ ಗಿರೀಶನನ್ನು ಭೇಟಿಯಾಗಿದ್ದಳು. ಏಪ್ರಿಲ್‌ನಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇದಾದ ಬಳಿಕ ಗಿರೀಶನ ಮೊಬೈಲ್ ನಂಬರ್ ಅನ್ನು ಅಂಜಲಿ ಬ್ಲಾಕ್ ಮಾಡಿದ್ದರು. ಇದರಿಂದ ಕೋಪಗೊಂಡ ಗಿರೀಶ ಆಕೆಯನ್ನು ಹತ್ಯೆಗೈದಿರುವುದಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ರೈಲ್ವೆ ಪೊಲೀಸರಿಗೆ ಸೆರೆ ಸಿಕ್ಕಿದ್ದ ಆರೋಪಿ: ಹತ್ಯೆಯ ನಂತರ ತಲೆಮರೆಸಿಕೊಂಡಿದ್ದ ಗಿರೀಶ ಸಾವಂತ ಮೇ 17ರಂದು ಬೆಳಗಾವಿಗೆ ವಿಶ್ವಮಾನವ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಮುಂಡರಗಿಯ ಮಹಿಳಾ ಪ್ರಯಾಣಿಕರೊಬ್ಬರೊಂದಿಗೆ ಜಗಳ ಮಾಡಿದ್ದ. ಈ ವೇಳೆ ಸಹ ಪ್ರಯಾಣಿಕರು ಆತನ ಮೇಲೆ ತಿರುಗಿ ಬಿದ್ದಿದ್ದರು. ಅವರಿಂದ ತಪ್ಪಿಸಿಕೊಳ್ಳಲು ಹೋದಾಗ ದಾವಣಗೆರೆ ಬಳಿ ರೈಲಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ. ದಾವಣಗೆರೆ ರೈಲ್ವೆ ಪೊಲೀಸರು ಆತನನ್ನು ವಶಕ್ಕೆ ಪಡೆದು ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು.
ಅಂಜಲಿಯನ್ನು ಕೊಲೆ ಮಾಡಲು ಗಿರೀಶ, ಮೈಸೂರಿನ ತಾನು ಕೆಲಸ ಮಾಡುತ್ತಿದ್ದ ಹೋಟೆಲ್‌ನಿಂದಲೇ ಚಾಕು ತಂದಿದ್ದ. ಮುಖವನ್ನು ಯಾರು ಗುರುತಿಸಬಾರದು ಎಂದು ಮಾಸ್ಕ್ ಖರೀದಿಸಿದ್ದ.
ಡಿಸಿಪಿ, ಎಸಿಪಿ, ಇನ್ಸ್‌ಪೆಕ್ಟರ್ ಸೇರಿ ನಾಲ್ವರು ಅಮಾನತು: ಈ ಹತ್ಯೆ ಪ್ರಕರಣ ಸಂಬಂಧ ನಿರ್ಲಕ್ಷ್ಯ ಆರೋಪದಡಿ ರಾಜ್ಯ ಸರ್ಕಾರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ, ಹುಬ್ಬಳ್ಳಿ ದಕ್ಷಿಣ ಉಪ ವಿಭಾಗದ ಎಸಿಪಿ, ಬೆಂಡಿಗೇರಿ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಮಹಿಳಾ ಮುಖ್ಯಪೇದೆಯೊಬ್ಬರನ್ನು ಅಮಾನತು ಮಾಡಿ ಆದೇಶಿಸಿತ್ತು.
ಇದನ್ನೂ ಓದಿ: ಲಿಂಗಸೂಗೂರಲ್ಲಿ ಬೆಳ್ಳಂಬೆಳಗ್ಗೆ ಜೋಡಿ ಕೊಲೆ - Double Murder