ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆ ಅರವಿಂದ್ ಗಾರ್ಮೆಂಟ್ಸ್ ಮತ್ತು ವೈಟ್ ವಾಷನ್ ಗಾರ್ಮೆಂಟ್ಸ್ ಬಳಿ ಗಸ್ತು ತಿರುಗುತ್ತಿದ್ದ ಪೊಲೀಸರು ಧವಳಗಿರಿ ಬಡಾವಣೆಯ 2 ನೇ ಹಂತದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ 6 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗೊಳಪಡಿಸಿದಾಗ 6 ಜನ ಬಾಂಗ್ಲಾ ನುಸುಳುಕೋರರು ಎಂಬುದು ಪತ್ತೆಯಾಗಿದೆ ಎಂದು ಚಿತ್ರದುರ್ಗ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಂಗ್ಲಾ ಮೂಲದ ಶೇಕ್ ಸೈಪುರ್ ರೊಹೆಮಾನ್, ಮೊಹಮ್ಮದ್ ಸುಮನ್ ಹುಸೇನ್ ಅಲಿ, ಮಜಾರುಲ್, ಅಜಿಜುಲ್ ಶೈಕ್, ಮುಹಮ್ಮದ್ ಸಾಕೀಬ್ ಸಿಕ್ದಾರ್, ಸನೊವರ್ ಹೊಸ್ಸೈನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆಸಿದ್ದಾರೆ.
ವಿಚಾರಣೆ ವೇಳೆ ಅವರ ಬಳಿ ಇದ್ದ ಕಾಗದ ಪತ್ರಗಳನ್ನು ಪರಿಶೀಲಿಸಿದಾಗ, 6 ಮಂದಿ ಬಾಂಗ್ಲಾದೇಶಕ್ಕೆ ಸೇರಿದ ಪ್ರಜೆಗಳಾಗಿದ್ದು, ಭಾರತಕ್ಕೆ ಬಂದು ಇಲ್ಲಿಯೇ ನೆಲೆಸುವ ಉದ್ದೇಶದಿಂದ ಈಗಾಗಲೇ ಸುಮಾರು ವರ್ಷಗಳ ಹಿಂದೆಯೇ ಅಕ್ರಮವಾಗಿ ಭಾರತಕ್ಕೆ ಬಂದಿದ್ದಾರೆ. ಮೊದಲು ಪಶ್ಚಿಮ ಬಂಗಾಳ ರಾಜ್ಯಕ್ಕೆ ಬಂದು, ಕೋಲ್ಕತ್ತಾ ನಗರದಲ್ಲಿ ನಕಲಿ ಆಧಾರ್ ಕಾರ್ಡ್, ಹಾಗೂ ಇತರೆ ದಾಖಲೆಗಳನ್ನು ಮಾಡಿಸಿಕೊಂಡು ಭಾರತದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ಚಿತ್ರದುರ್ಗ ನಗರದಲ್ಲಿ ಕೆಲಸಕ್ಕಾಗಿ ಬಂದಿದ್ದರು ಎಂಬ ಮಾಹಿತಿ ಇದೆ.
6 ಮಂದಿಯಿಂದ ನಕಲಿ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಲೇಬರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಾನ್ ಕಾರ್ಡ್ಗಳು, ಹಾಗೂ ಒಂದು ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಸೆನ್ ಠಾಣೆ ಸಿಪಿಐ ಎನ್. ವೆಂಕಟೇಶ, ವಿಶೇಷ ವಿಭಾಗದ ಸಿಪಿಐ ಎನ್. ಗುಡ್ಡಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ಕಾರ್ಯಾಚರಣೆ ಕೈಗೊಂಡಿದೆ.
ಇದನ್ನೂ ಓದಿ: 7 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಬಾಂಗ್ಲಾ ಪ್ರಜೆ ಬಂಧನ