ಹುಬ್ಬಳ್ಳಿ: ಮಹಿಳೆಯ ಹೊಟ್ಟೆಯೊಳಗಿದ್ದ 2.2 ಕೆ.ಜಿ. ಗಡ್ಡೆಯನ್ನು ಹೊರತೆಗೆಯುವಲ್ಲಿ ಚಿಟಗುಪ್ಪಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರದ 42 ವಯಸ್ಸಿನ ಮಹಿಳೆ ಹೊಟ್ಟೆ ನೋವು, ರಕ್ತಹೀನತೆ ಹಾಗೂ ಸುಸ್ತಿನಿಂದ ಬಳಲುತ್ತಿದ್ದರು. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡಪ್ಪನವರ ಅವರ ಬಳಿ ಬಂದು ಈ ಕುರಿತು ನೋವು ತೋಡಿಕೊಂಡಿದ್ದರು.
ಡಾ.ಶ್ರೀಧರ ಅವರು ಎರಡು ದಿನಗಳ ಹಿಂದೆ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ 2.2 ಕೆ.ಜಿ ತೂಕದ ಗಡ್ಡೆ (ಫೈಬ್ರಾಯಿಡ್ ಯುಟ್ರಸ್) ಇರುವುದು ಪತ್ತೆಯಾಗಿತ್ತು. ಎರಡು ಬಾರಿ ಸಿಜೆರಿಯನ್ ಆಗಿದ್ದು, ಮೊದಲೇ ರಕ್ತಹೀನತೆಯಿಂದ ಬಳಲುತ್ತಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ ನೆರವೇರಿಸುವುದು ಅನಿವಾರ್ಯ ಎಂದು ಮನಗಂಡು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದ್ದುರ. ಮಂಗಳವಾರ ಬೆಳಗ್ಗೆ ಶುಶ್ರೂಷಾಧಿಕಾರಿಗಳಾದ ರಾಮು, ಮಂಜುಳಾ, ಪೂಜಾ, ಸುನೀಲ್, ತೇಜಸ್ವಿನಿ ಅವರ ಸಹಾಯದೊಂದಿಗೆ ಡಾ.ಶ್ರೀಧರ ದಂಡಪ್ಪನವರ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.
ಈ ಕುರಿತು 'ಈಟಿವಿ ಭಾರತ'ದ ಜೊತೆ ಮಾತನಾಡಿದ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀಧರ ದಂಡಪ್ಪನವರ, "ಇದೊಂದು ಕ್ಲಿಷ್ಟ ಶಸ್ತ್ರಚಿಕಿತ್ಸೆ. ಎರಡು ಗಂಟೆಗೂ ಹೆಚ್ಚು ಸಮಯ ತಗೆದುಕೊಂಡು ಶಸ್ತ್ರಚಿಕಿತ್ಸೆ ನಡೆಸಿ 2.2 ಕೆ.ಜಿ. ಗಡ್ಡೆ ಹೊರತೆಗೆದಿದ್ದೇವೆ. ಈಗ ಮಹಿಳೆ ಆರೋಗ್ಯವಾಗಿದ್ದಾರೆ. ನಾಳೆ ಅಥವಾ ನಾಡಿದ್ದು ಡಿಸ್ಚಾರ್ಜ್ ಮಾಡಲಾಗುವುದು. ಸರ್ಕಾರಿ ಆಸ್ಪತ್ರೆಯಲ್ಲಿ ಈ ರೀತಿಯ ಇಷ್ಟು ದೊಡ್ಡ ಗಡ್ಡೆ ತೆಗೆದಿರುವುದು ಇದೇ ಮೊದಲು" ಎಂದರು.
ಇದನ್ನೂ ಓದಿ: ಬ್ರೈನ್ ಟ್ಯೂಮರ್ ಶಸ್ತ್ರಚಿಕಿತ್ಸೆ ಯಶಸ್ವಿ: 450 ಗ್ರಾಂ ತೂಕದ ಗಡ್ಡೆ ಹೊರತೆಗೆದ ವೈದ್ಯರು - Brain tumor surgery successful