ಚಿಕ್ಕೋಡಿ: ಮನೆಗಳ್ಳತನಕ್ಕೆ ಬಂದ ಕಳ್ಳರನ್ನು ಗ್ರಾಮಸ್ಥರು ಸಿನಿಮೀಯ ಶೈಲಿಯಲ್ಲಿ ಬಂಧಿಸಿ ಧರ್ಮದೇಟು ನೀಡಿ ಪೊಲೀಸರಿಗೆ ಹಸ್ತಾಂತರಿಸಿರುವ ಘಟನೆ ಅಥಣಿ ತಾಲೂಕಿನ ಬಡಚಿ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವ ನಡೆದಿದೆ.
ರಾತ್ರಿ ಕಳ್ಳತನಕ್ಕೆ ಬಂದ ಮಹಾರಾಷ್ಟ್ರ ಮೂಲದ ಕಳ್ಳರನ್ನು ಗ್ರಾಮಸ್ಥರು ರಸ್ತೆ ತಡೆಹಿಡಿದು ಬಂಧಿಸಿದ್ದಾರೆ. ಐದು ಜನ ಕಳ್ಳರ ಪೈಕಿ ಇಬ್ಬರು ಗ್ರಾಮಸ್ಥರಿಗೆ ಸಿಕ್ಕಿದ್ದು ಮೂವರು ಪರಾರಿಯಾಗಿದ್ದಾರೆ.
ಕಳ್ಳರನ್ನು ಹಿಡಿದಿದ್ದು ಹೇಗೆ; ಗ್ರಾಮದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಾಣಿಸುತ್ತಿದ್ದಂತೆ, ಅವರನ್ನು ಯುವಕರ ತಂಡ ಹಿಂಬಾಲಿಸುತ್ತಾ, ಗ್ರಾಮದ ತುಂಬೆಲ್ಲ ದೂರವಾಣಿ ಮುಖಾಂತರ ಕರೆ ಮಾಡಿ ಗ್ರಾಮಸ್ಥರನ್ನು ಒಂದುಗೂಡಿಸಿದ್ದಾರೆ. ವಿಜಯಪುರ - ಸಂಕೇಶ್ವರ್ ರಾಜ್ಯ ಹೆದ್ದಾರಿ ಮೇಲೆ ತಡೆಗಟ್ಟಿ ಖದೀಮರನ್ನು ಬಂಧಿಸಿದ್ದಾರೆ. ಅಷ್ಟರೊಳಗೆ ಅಥಣಿ ಪೊಲೀಸರು ಆಗಮಿಸಿ ಗ್ರಾಮಸ್ಥರಿಗೆ ಸಾಥ್ ನೀಡಿ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಕೃಷ್ಣನ್ ಹಾಗೂ ರಮೇಶ್ ಎಂಬವರನ್ನು ಅಥಣಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮನೆಗಳ್ಳತನ, ದೇವಸ್ಥಾನದಲ್ಲಿ ಕಳ್ಳತನ ಮಾಡಿ ಅಪಾರ ಪ್ರಮಾಣದ ಚಿನ್ನ, ಹಣ ದೋಚಿ ಹೋಗಿದ್ದ ಗ್ಯಾಂಗ್ ಬೆಳಗಾವಿ ಪೊಲೀಸರಿಗೆ ಸವಾಲಾಗಿತ್ತು. ಸದ್ಯ ಗ್ಯಾಂಗ್ನ ಸದಸ್ಯರನ್ನು ಪೊಲೀಸರು ಬಂಧಿಸಿದ್ದರಿಂದ ಗಡಿಭಾಗದ ಜನರು ನಿಟ್ಟುಸಿರುಬಿಟ್ಟಿದ್ದಾರೆ.
ಇದನ್ನೂ ಓದಿ: ಮಾಜಿ ಸಚಿವರಿಗೆ ಬ್ಲ್ಯಾಕ್ಮೇಲ್: ನಲಪಾಡ್ ಬ್ರಿಗೇಡ್ ಜಿಲ್ಲಾ ಘಟಕದ ಅಧ್ಯಕ್ಷೆ, ಪತಿ ಬಂಧನ