ಬೆಂಗಳೂರು : ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ನಂತರ ಬಿಜೆಪಿಯಲ್ಲಿ ಎದ್ದಿರುವ ಬಂಡಾಯ, ಅಸಮಾಧಾನದ ಹೊಗೆ ನಡುವೆ ಮಿತ್ರಪಕ್ಷ ಜೆಡಿಎಸ್ ಕೂಡ ಅಸಮಾಧಾನ ಹೊರಹಾಕಿದೆ. ಈ ವಿಚಾರಗಳೊಂದಿಗೆ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ದೆಹಲಿಗೆ ತೆರಳಿದ್ದಾರೆ. ಎರಡನೇ ಪಟ್ಟಿ ಬಿಡುಗಡೆ ಹಾಗೂ ಅಸಮಾಧಾನ ಶಮನ ಕುರಿತು ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ.
ದೆಹಲಿ ವಿಮಾನ ಏರುವ ಮೊದಲು ಬಿಎಸ್ವೈ ಅವರ ಡಾಲರ್ಸ್ ಕಾಲೊನಿ ನಿವಾಸ ಧವಳಗಿರಿಲ್ಲಿ ಮಹತ್ವದ ಚರ್ಚೆಯಾಗಿದೆ. ಮೈತ್ರಿ ವಿಚಾರದಲ್ಲಿ ಬಿಜೆಪಿ ವರಿಷ್ಠರ ಧೋರಣೆಯ ಬಗ್ಗೆ ಸೋಮವಾರ ನಡೆದ ಜೆಡಿಎಸ್ ಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಸಹನೆ ವ್ಯಕ್ತಪಡಿಸಿರುವುದು, ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಘೋಷಣೆ ಮಾಡಿರುವುದು, ಮಾಜಿ ಸಿಎಂ ಡಿ.ವಿ.ಸದಾನಂದಗೌಡರು ಅಸಮಾಧಾನಗೊಂಡಿರುವುದು, ಬೆಳಗಾವಿಯಲ್ಲಿ ಜಗದೀಶ ಶೆಟ್ಟರ್ ಉಮೇದುವಾರಿಕೆಗೆ ಅಪಸ್ವರ ವ್ಯಕ್ತವಾಗುತ್ತಿರುವ ಕುರಿತು ಚರ್ಚಿಸಿ ದೀರ್ಘ ಸಮಾಲೋಚನೆ ನಡೆಸಿದರು. ಹೈಕಮಾಂಡ್ ಮುಂದೆ ಈ ಎಲ್ಲ ವಿಷಯಗಳ ಪ್ರಸ್ತಾಪ ಮಾಡಿ ಚರ್ಚಿಸುವ ಕುರಿತು ಪೂರ್ವ ತಯಾರಿ ನಡೆಸಿದರು. ಈ ವೇಳೆ, ಈಶ್ವರಪ್ಪ ವಿಚಾರ ಹೈಕಮಾಂಡ್ಗೆ ಬಿಡಬೇಕು. ಸದಾನಂದಗೌಡರ ಮನವೊಲಿಕೆ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಕೂಡಲೇ ದೂರವಾಣಿ ಮೂಲಕ ಸದಾನಂದಗೌಡ ಸಂಪರ್ಕ ಮಾಡಿದ ಬಿ.ವೈ ವಿಜಯೇಂದ್ರ ಮನವೊಲಿಕೆಗೆ ಪ್ರಯತ್ನ ನಡೆಸಿದರು. ಯಡಿಯೂರಪ್ಪ ಸಂದೇಶವನ್ನು ತಿಳಿಸಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಆಹ್ವಾನ ನೀಡಿದರು. ಆದರೆ ಇದನ್ನು ಒಪ್ಪದ ಸದಾನಂದಗೌಡ ತಮ್ಮ ನಿರ್ಧಾರ ಅಚಲವಾಗಿದೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಗಾಗಿ ಪಟ್ಟುಹಿಡಿದಿದ್ದಾರೆ. ಹೀಗಾಗಿ ಹೈಕಮಾಂಡ್ ಮುಂದೆಯೇ ವಿಚಾರ ಪ್ರಸ್ತಾಪ ಮಾಡುವ ನಿರ್ಧಾರಕ್ಕೆ ರಾಜ್ಯ ನಾಯಕರು ಬಂದಿದ್ದಾರೆ.
ಸಭೆಯಲ್ಲಿ ಲೋಕಸಭೆ ಚುನಾವಣೆ ರಾಜ್ಯ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಭಾಗಿಯಾಗಿದ್ದರು. ನಂತರ ಮಾಜಿ ಸಚಿವ ಗೋವಿಂದ ಕಾರಜೋಳ, ಸುರಪುರ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ರಾಜೂಗೌಡ, ಬಿಎಸ್ವೈ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಶೆಟ್ಟರ್ಗೆ ಟಿಕೆಟ್ ಬೇಡ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡುವುದಕ್ಕೆ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಬೆಂಗಳೂರಿನಲ್ಲಿ ರಾಧಾ ಮೋಹನ್ ದಾಸ್ ಅಗರವಾಲ್ ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಿದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ್ ಪಾಟೀಲ್, ಮಾಜಿ ಎಂಎಲ್ಸಿ ಮಹಾಂತೇಶ್ ಕವಟಗಿಮಠ, ಮಾಜಿ ಶಾಸಕ ಅನಿಲ್ ಬೆನಕೆ ಸೇರಿದಂತೆ ಸುಮಾರು ಹತ್ತು ಮುಖಂಡರು ಇಂದು ಬೆಳಗ್ಗೆ ಮನವಿ ಸಲ್ಲಿಕೆ ಮಾಡಿದರು.
ಇದನ್ನೂ ಓದಿ : ಬೆಳಗಾವಿ: ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಬೆಂಗಳೂರಿಗೆ ಹೊರಟ ಜಿಲ್ಲಾ ಬಿಜೆಪಿ ನಾಯಕರು