ಮಂಗಳೂರು: ವ್ಯಕ್ತಿಯೊಬ್ಬ 14 ವರ್ಷಗಳ ಬಳಿಕ ತನ್ನ ಕುಟುಂಬ ಸೇರಿದ ಭಾವನಾತ್ಮಕ ಕ್ಷಣಗಳಿಗೆ ನಗರದ ಸೇವಾ ಸಂಸ್ಥೆ ವೈಟ್ ಡೌಸ್ ಸಾಕ್ಷಿಯಾಯಿತು. ಶಿವಕುಮಾರ್(45) ಮರಳಿ ಕುಟುಂಬ ಸೇರಿದವರು.
2008ರಲ್ಲಿ ಛತ್ತೀಸ್‌ಗಢ ಮೂಲದ ಶಿವಕುಮಾರ್ ತನ್ನ ಕುಟುಂಬದೊಂದಿಗೆ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ದೆಹಲಿಗೆ ತೆರಳಿದ್ದರು. ಈ ವೇಳೆ ಶಿವಕುಮಾರ್ ಅವರ ತಾಯಿ ಕಟ್ಟಡದ ಮೇಲಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ದುರ್ಘಟನೆಯ ಬಳಿಕ ಅವರ ಕುಟುಂಬ ಛತ್ತೀಸ್‌ಗಢಕ್ಕೆ ಮರಳಲು ನಿರ್ಧರಿಸಿ, ದೆಹಲಿಯ ರೈಲು ನಿಲ್ದಾಣದಿಂದ ಛತ್ತೀಸ್‌ಗಢಕ್ಕೆ ಪ್ರಯಾಣಿಸಿತ್ತು. ಆದರೆ ಶಿವಕುಮಾರ್ ಕುಟುಂಬದಿಂದ ಬೇರ್ಪಟ್ಟಿದ್ದರು. ಆತನ ಕುಟುಂಬಸ್ಥರು ಮರಳಿ ದೆಹಲಿಗೆ ಬಂದು ಎಷ್ಟೇ ಹುಡುಕಿದರೂ ಪತ್ತೆಯಾಗಿರಲಿಲ್ಲ.
ವೈಟ್‌ಡೌಸ್ ಸಂಸ್ಥೆಯ ಆಶ್ರಯ: 2010ರಲ್ಲಿ ಮಂಗಳೂರಿನ ಎಸ್.ಪಿ ಕಚೇರಿಯ ಬಳಿಯಿಂದ ಸ್ಥಳೀಯರೊಬ್ಬರು ವೈಟ್‌ಡೌಸ್ ಸಂಸ್ಥೆಗೆ ಕರೆ ಮಾಡಿ ನಿರ್ಗತಿಕ ವ್ಯಕ್ತಿಯೊಬ್ಬ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ವೈಟ್‌ಡೌಸ್ ಸಂಸ್ಥೆಯ ಸ್ಥಾಪಕಿ ಕೊರಿನ್ ರಸ್ಕಿನಾ ಅವರು, ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿದ್ದ ಶಿವಕುಮಾರ್ನನ್ನು ಕರೆದಂತು ಆಶ್ರಯ ಕಲ್ಪಿಸಿದ್ದರು. ಈ ಸಂದರ್ಭದಲ್ಲಿ ಶಿವಕುಮಾರ್ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಮತ್ತು ಕಡಿಮೆ ಮಾತನಾಡುತ್ತಿದ್ದರು. ಆದರೆ, ಸಂಸ್ಥೆಯ ನಿರಂತರ ಆರೈಕೆ ಮತ್ತು ಔಷಧೋಪಚಾರದಿಂದ ಶಿವಕುಮಾರ್ ಮಾನಸಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಸುಮಾರು ಹದಿನಾಲ್ಕು ವರ್ಷದ ಬಳಿಕ ಶಿವಕುಮಾರ್ ತನ್ನ ಮನೆಯವರನ್ನು ನೆನಪು ಮಾಡಿಕೊಂಡು, ತನ್ನ ಚಿಕ್ಕಪ್ಪನ ಕುರಿತು ಮಾಹಿತಿ ನೀಡಿದ್ದಾರೆ. ಆ ಮಾಹಿತಿ ಆಧರಿಸಿ ಹುಡುಕಿದಾಗ ಕುಟುಂಬ ಪತ್ತೆಯಾಗಿದೆ. ಶಿವಕುಮಾರ್ ಇರುವ ಬಗ್ಗೆ ಮಾಹಿತಿ ಪಡೆದ ಕುಟುಂಬ ಛತ್ತೀಸ್ಗಢದಿಂದ ಮಂಗಳೂರಿಗೆ ಬಂದಿದೆ. ಈ ವೇಳೆ ತನ್ನನ್ನು ಕಾಣಲು ಹಾತೊರೆಯುತ್ತಿದ್ದ ತಾಯಿ ಎರಡು ವರ್ಷಗಳ ಹಿಂದೆಯೇ ಮೃತಪಟ್ಟ ವಿಚಾರ ತಿಳಿದು ಶಿವಕುಮಾರ್ ಕಂಬನಿ ಮಿಡಿದರು.
450ನೇ ಪುನರ್ಮಿಲನ: ವೈಟ್ ಡೌಸ್ ಸಂಸ್ಥೆಯ ಸ್ಥಾಪಕಿ ಕೊರಿನ್ ರಸ್ಕಿನಾ 'ಈಟಿವಿ ಭಾರತ್' ಜೊತೆಗೆ ಮಾತನಾಡಿ, "2010ರಲ್ಲಿ ಶಿವಕುಮಾರ್ ನಿರ್ಗತಿಕರಾಗಿ ಬಸ್‌ಸ್ಟ್ಯಾಂಡ್‌ನಲ್ಲಿ ಪತ್ತೆಯಾಗಿದ್ದರು. ಅವರು ತಮ್ಮ ಹಿಂದಿನ ಬದುಕಿನ ಬಗ್ಗೆ ಏನೂ ನೆನಪಿಸಿಕೊಳ್ಳಲಾಗುತ್ತಿರಲಿಲ್ಲ. ಇತ್ತೀಚೆಗೆ ಅವರು ತಮ್ಮ ಕುಟುಂಬದ ವಿವರಗಳನ್ನು ನಮಗೆ ನೀಡಿದ್ದರಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಯಿತು. ಸಂಸ್ಥೆ ಶಿವಕುಮಾರ್ ಅವರನ್ನು ತನ್ನ ಕುಟುಂಬವನ್ನು ಸೇರಿಸಿದೆ. ಇದು ಸಂಸ್ಥೆ ಮಾಡಿದ 450ನೇ ಪುನರ್ಮಿಲನವಾಗಿದೆ. ನೋವಿನ ಸಂಗತಿ ಎಂದರೆ ಮಗನನ್ನು ಕಾಣಲು ಹಂಬಲಿಸುತ್ತಿದ್ದ ತಾಯಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ" ಎಂದು ತಿಳಿಸಿದರು.
ಶಿವಕುಮಾರ್ ಸಂಬಂಧಿ ದುಮನ್ ಸಿಂಗ್ ಭಾರದ್ವಾಜ್ ಮಾತನಾಡಿ, "ಶಿವಕುಮಾರ್ 2008ರಲ್ಲಿ ನಾಪತ್ತೆಯಾಗಿದ್ದ. ನಮ್ಮ ಕುಟುಂಬ ಹದಿನಾಲ್ಕು ವರ್ಷಗಳಿಂದ ಹುಡುಕಾಡುತ್ತಿತ್ತು. ಇವತ್ತು ಅವನನ್ನು ನೋಡಿ ಸಂತಸವಾಗಿದೆ. ಆದರೆ, ಶಿವಕುಮಾರ್ ತಾಯಿ ಈ ಸಂತಸದ ಕ್ಷಣವನ್ನು ಅನುಭವಿಸದೇ ಇಹಲೋಕ ತ್ಯಜಿಸಿರುವುದು ನಮ್ಮ ಕುಟುಂಬಕ್ಕೆ ದುಃಖ ತಂದಿದೆ" ಎಂದರು.
ವೈಟ್ ಡೌಸ್ ಸಂಸ್ಥೆಯ ಕುರಿತು..: ಮಂಗಳೂರಿನ ಮರೋಳಿಯಲ್ಲಿ 1992ರಲ್ಲಿ ವೈಟ್ ಡೌಸ್ ಸಂಸ್ಥೆಯನ್ನು ಆರಂಭಿಸಲಾಯಿತು. ಈ ಸಂಸ್ಥೆಯಿಂದ ನಿರ್ಗತಿಕರ, ಮಾನಸಿಕ ಅಸ್ವಸ್ಥರ ಸೇವೆ ಮಾಡುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಮಂಗಳೂರಿನ ವಿವಿಧೆಡೆ ಸಿಕ್ಕಿದ್ದ 450 ನಿರ್ಗತಿಕರನ್ನು, ಮಾನಸಿಕ ಅಸ್ವಸ್ಥರನ್ನು ಮನೆಗೆ ಸೇರಿಸಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಮೌಸೀನ್ ಎಂಬಾತನನ್ನು 15 ವರ್ಷದ ಬಳಿಕ ಮನೆಗೆ ಸೇರಿಸಲಾಗಿತ್ತು. ಇದು ಅತೀ ಹೆಚ್ಚು ಅವಧಿಯ ಬಳಿಕ ಮನೆಗೆ ಸೇರಿಸಿದ ಪ್ರಕರಣವಾಗಿದೆ. ಸದ್ಯ ವೈಟ್ ಡೌಸ್ ಸಂಸ್ಥೆಯಲ್ಲಿ 197 ನಿರ್ಗತಿಕರಿದ್ದಾರೆ. ಇವರಲ್ಲಿ ಸುಮಾರು 21 ವರ್ಷಕ್ಕೂ ಹಿಂದೆ ಸಿಕ್ಕವರೂ ಇದ್ದಾರೆ.
ಇದನ್ನೂ ಓದಿ: ಕುಮಾರಧಾರ ನದಿಯಲ್ಲಿ ಕುಕ್ಕೆ ದೇವರಿಗೆ ನೌಕಾವಿಹಾರ, ಅವಭೃತೋತ್ಸವ: ಯಶಸ್ವಿನಿಯ ನೀರಾಟಕ್ಕೆ ಮನಸೋತ ಭಕ್ತರು