ಬೆಂಗಳೂರು: ಚುನಾವಣೆ ಮಾಡಲು ಹೆದರುವುದಿಲ್ಲ, ಹಿಂಜರಿಯುವುದಿಲ್ಲ. ಇನ್ನೂ ಮೂರು ದಿನಗಳ ಸಮಯ ಇದೆ. ನೋಡೋಣ ಏನಾಗುತ್ತದೆ. ನನ್ನ ಕಾರ್ಯಕರ್ತರ ಭಾವನೆಯೇ ಅಂತಿಮ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಬಹಿರಂಗ ಸಭೆ ನಡೆಸಿ ಅವರು ಮಾತನಾಡಿದರು. ಎನ್ಡಿಎ ಸಂಬಂಧವನ್ನು ನಾನು ಉಳಿಸಿಕೊಂಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರಿಗೆ ಕೊಟ್ಟಷ್ಟು ಗೌರವವನ್ನು ಯಾರಿಗೂ ಕೊಡುವುದಿಲ್ಲ. ಈ ಸಂಬಂಧವನ್ನು ಉಳಿಸಿಕೊಳ್ಳಲು ನಾವು ಸುಮ್ಮನೆ ಇದ್ದೇವೆ. ಅದಕ್ಕಾಗಿ ನೆಲದವರೆಗೂ ಬಗ್ಗಿದ್ದೇನೆ. ಇನ್ನೂ ಬಗ್ಗುವುದಕ್ಕೆ ಆಗುವುದಿಲ್ಲ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ನನಗೆ ಫೋನ್ ಮಾಡಿ, ಜೆಡಿಎಸ್ನಿಂದ ಸ್ಪರ್ಧೆ ಮಾಡಲಿ ಎಂದು ತಿಳಿಸಿದ್ದಾರೆ. ಇಂತಹ ಗೌರವ ಕೊಟ್ಟಿರುವ ಬಿಜೆಪಿ ನಾಯಕರ ಜೊತೆ ಸಂಬಂಧ ಹಾಳು ಮಾಡಿಕೊಳ್ಳಲಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನವರು ಎಂತಹ ಸಂದರ್ಭದಲ್ಲಿ ಕತ್ತು ಕೊಯ್ದಿದ್ದಾರೆ ಎಂಬುದು ಗೊತ್ತಿದೆ. ತಾಳಿದವನು ಬಾಳಿಯಾನು. ಸಂಜೆವರೆಗೆ ನೋಡೋಣ ಎಲ್ಲ ಭಗವಂತನ ಇಚ್ಛೆ. ಯಾವುದೇ ಕಾರಣಕ್ಕೂ ಯಾರಿಗೂ ಬೆಂಡಾಗಲ್ಲ. ನನ್ನ ಕಾರ್ಯಕರ್ತರ ಭಾವನೆಯೇ ಅಂತಿಮ ಎಂದು ಹೆಚ್ಡಿಕೆ ಸ್ಪಷ್ಟಪಡಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನವರು ನಮ್ಮನ್ನು ಪಾತಾಳಕ್ಕೆ ತುಳಿದಿದ್ರು. ಆಮೇಲೆ ಹೊಸ ಅಧ್ಯಾಯದಂತೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಲೋಕಸಭೆಯಲ್ಲಿ ಸ್ಪರ್ಧೆ ಮಾಡಿದ್ದೆವು. ಆಗ ಮಂಡ್ಯದಲ್ಲೂ ಭಿನ್ನಾಭಿಪ್ರಾಯ ಇತ್ತು. ಅವತ್ತು ಚನ್ನಪಟ್ಟಣ ಮುಖಂಡರನ್ನು ಕರೆದು ಸಭೆ ಮಾಡಿದ್ದೆ. ಅವತ್ತು ಬಹಳ ಜನ ವಿರೋಧ ವ್ಯಕ್ತಪಡಿಸಿದ್ರು. ವಿರೋಧದ ನಡುವೆ ನಾನು ಮಂಡ್ಯದಲ್ಲಿ ಸ್ಪರ್ಧೆಗೆ ಒಪ್ಪಿಗೆ ಕೊಟ್ಟೆ. ಅಂತಿಮವಾಗಿ ನಾನು ಮಂಡ್ಯದಲ್ಲಿ ನಿಲ್ಲಬೇಕಾಯ್ತು. ಅಂದು ಮಂಡ್ಯದಲ್ಲಿ ನಿಖಿಲ್, ಹಿಂದೆ ರಾಮನಗರದಲ್ಲಿ ಹೆಚ್.ಡಿ. ದೇವೇಗೌಡರು ಸೋತಿದ್ದರು. ಹಾಗಂತ ಮನೆಯಲ್ಲಿ ಕೂತಿದ್ದರಾ?, ನಾನೂ ಕೂಡ ಸೋತಿದ್ದೆ, ಹಾಗಂತ ಸುಮ್ಮನೆ ಕೂರಲ್ಲ ಎಂದು ಹೇಳಿದರು.
ನಾವು ಚುನಾವಣೆಗೆ ಹೆದರಲ್ಲ. 2006-07 ರಲ್ಲಿ ಸಿದ್ದರಾಮಯ್ಯ ಪಕ್ಷ ಬಿಟ್ಟು ಹೋದ್ರು, ಆಗ ಶಿವಬಸಪ್ಪನವರನ್ನು ನಿಲ್ಲಿಸಿ ಕಡಿಮೆ ಅಂತರದಿಂದ ಸೋತೆವು. ಚನ್ನಪಟ್ಟಣದಲ್ಲಿ ಚುನಾವಣೆ ನಡೆಸಲು ನಾನು ಹಿಂಜರಿದಿಲ್ಲ. ಜೆಡಿಎಸ್ನ ಮುಗಿಸಲಿಕ್ಕೆ ಅಂತಾ ನಮ್ಮಿಂದಲೇ ಹೋದವರು ಅನೇಕರು ಇದ್ದಾರೆ. ಅವರ ಬಗ್ಗೆ ದೇವರಿಗೆ ಬಿಡುತ್ತೇನೆ ಎಂದು ಕುಮಾರಸ್ವಾಮಿ ಭಾವನಾತ್ಮಕವಾಗಿ ಹೇಳಿದರು.
ಇದನ್ನೂ ಓದಿ: ಸಂಜೆವೆರೆಗೂ ಕಾದು ನೋಡಿ ಮುಂದಿನ ತೀರ್ಮಾನ: ಸಿಪಿ ಯೋಗೇಶ್ವರ್
ಜೆಪಿ ನಡ್ಡಾ ಅವರು ಯೋಗೇಶ್ವರ್ಗೆ ಜೆಡಿಎಸ್ ಟಿಕೆಟ್ ಕೊಡಿ ಎಂದು ಕೇಳಿದ್ದಾರೆ. ಇನ್ನು ಪ್ರಲ್ಹಾದ್ ಜೋಷಿ ಅವರು ಬಿಜೆಪಿಗೆ ಬಿಟ್ಟು ಕೊಡಿ ಎಂದಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಯೋಗೇಶ್ವರ್ ಸ್ವಾಗತಕ್ಕೆ ಕ್ಯೂ ನಿಂತಿದ್ದಾರೆ. ಚನ್ನಪಟ್ಟಣ ಕಾರ್ಯಕರ್ತರ ಸಭೆಯಲ್ಲಿ ಅವರ ಭಾವನೆಗಳನ್ನು ಅರಿತುಕೊಂಡಿದ್ದೇನೆ. ಸ್ಥಳಿಯವಾಗಿ ಬಿಜೆಪಿ ನಾಯಕರಲ್ಲಿ ಗೊಂದಲವಿದೆ. ಇನ್ನೂ ಮೂರು ದಿನ ಸಮಯವಿದೆ. ಎಲ್ಲಾ ಬೆಳವಣಿಗೆ ಗಮನಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ಮಾಜಿ ಸಚಿವರಾದ ಸಾ.ರಾ. ಮಹೇಶ್, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಶಾಸಕ ಮಂಜುನಾಥ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಸೇರಿದಂತೆ ಅನೇಕ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಬೆಂಗಳೂರಲ್ಲಿ ಮಳೆಗೆ ಕುಸಿದ ನಿರ್ಮಾಣ ಹಂತದ ಕಟ್ಟಡ; ಓರ್ವ ಸಾವು, ಅವಶೇಷಗಳಡಿ ಐವರು - ಸಿಸಿಟಿವಿಯಲ್ಲಿ ದೃಶ್ಯ ಸೆರೆ