ಬೆಂಗಳೂರು: "ವರದಕ್ಷಿಣೆ ಕಿರುಕುಳ ಕಾನೂನು ದುರ್ಬಳಕೆಯ ಬಗ್ಗೆ ಮುಂದೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಚರ್ಚೆಯಾಗಬೇಕು. ಕಾನೂನಿನಲ್ಲಿ ಬದಲಾವಣೆ ಆಗಬೇಕು. ದೇಶ ಹಾಗೂ ರಾಜ್ಯದ ಕಾನೂನಿನಲ್ಲಿಯೂ ಬದಲಾವಣೆ ಆಗಬೇಕಿದೆ" ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟೆಕ್ಕಿ ಅತುಲ್ ಸುಭಾಷ್ ಪತ್ನಿ ನಿಖಿತಾ, ಅತ್ತೆ ನಿಶಾ ಮತ್ತು ಬಾಮೈದ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿ, "ಅವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಈಗಾಗಲೇ ಡೆತ್ನೋಟ್ ಪಡೆದುಕೊಂಡಿದ್ದಾರೆ. ಮಹಿಳೆಯರಿಗಿರುವ ಕಾನೂನು ದುರ್ಬಳಕೆ ಆಗಿದೆ ಎಂಬುದೂ ಸೇರಿದಂತೆ ಅನೇಕ ವಿಚಾರಗಳನ್ನು ಡೆತ್ನೋಟಲ್ಲಿ ಅತುಲ್ ಬರೆದಿದ್ದಾರೆ. ಕಾನೂನಿನಲ್ಲಿರುವ ಅಂಶಗಳು ಗಂಡಂದಿರಿಗೆ ತೊಂದರೆ ಆಗುತ್ತಿವೆ ಎಂಬುದು ಆರೋಪ. ಇದು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ. ಮಹಿಳೆಯರಿಗೆ ಕೊಟ್ಟಿರುವ ಹಕ್ಕು ದುರ್ಬಳಕೆ ಆಗುತ್ತಿದೆ ಎನ್ನುವ ಕೂಗು ಕೇಳಿ ಬಂದಿದೆ" ಎಂದರು.
ಕಾಂಗ್ರೆಸ್ ವಿರುದ್ಧ ಅನ್ವರ್ ಮಾಣಿಪ್ಪಾಡಿ ಆರೋಪಕ್ಕೆ, "ಅವರು ಯಾವ ರೀತಿ ಮಾತಾಡಿದ್ದಾರೆ ಎಂಬ ವಿಡಿಯೋ ಫೂಟೇಜ್ ಇದೆ. ಮಾಧ್ಯಮಗಳಲ್ಲೂ ಅದನ್ನು ಕವರ್ ಮಾಡಿದ್ದರು. ಈಗ ಮಾತು ಬದಲಾಯಿಸುತ್ತಾರೆ ಅಂದ್ರೆ ಅದನ್ನು ಯಾವ ರೀತಿ ತೆಗೆದುಕೊಳ್ಳಬೇಕು ಅಂತ ಗೊತ್ತಾಗ್ತಿಲ್ಲ. ಒಂದಂತೂ ನಿಜ ವಿಜಯೇಂದ್ರ ಅವರ ಮನೆಗೆ ಹೋಗಿದ್ರು. ಈ ಬಗ್ಗೆ ಅವರೇ ಹೇಳಿದ್ರು. ಅವರು ಹೇಳಲಿಲ್ಲಂದ್ರೆ ಯಾರಿಗೆ ಗೊತ್ತಾಗುತ್ತಿತ್ತು?. ಮಾಧ್ಯಮದವರು ಕೇಳಿದಾಗ ಕನ್ಫರ್ಮ್ ಮಾಡಿದ್ದಾರೆ. ಈಗ ಬಂದು ಹೇಳಲಿಲ್ಲ ಅಂದ್ರೆ ಮಾತಿನಲ್ಲಿ ನಂಬಿಕೆ ಇಲ್ಲ ಅಂತ ಆಗುತ್ತೆ. ನೋಡೋಣ ನಾಳೆ ಸದನದಲ್ಲಿ ಪ್ರಸ್ತಾಪ ಮಾಡಬಹುದು" ಎಂದು ಹೇಳಿದರು.
ಕೋವಿಡ್ ವಿಚಾರವಾಗಿ ಅಧಿಕಾರಿಗಳ ವಿರುದ್ಧ ಮೊದಲ FIR ಕುರಿತು ಪ್ರತಿಕ್ರಿಯಿಸಿ, "ಆ ಸಂದರ್ಭದಲ್ಲಿ ಕೋವಿಡ್ ಭ್ರಷ್ಟಾಚಾರ ಆಗಿರುವುದು ಸತ್ಯ. ಜಸ್ಟೀಸ್ ಮೈಕಲ್ ಡಿ'ಕುನ್ಹಾ ಹೇಳಿದ್ದಾರೆ. ಕುನ್ಹಾ ಅವರು ವರದಿಯಲ್ಲಿ ಪ್ರತಿ ಸೆಕ್ಷನ್ ನೋಡಿದ್ದಾರೆ. ಮಾಸ್ಕ್ ಕಿಟ್ ಖರೀದಿ, ಆಕ್ಸಿಜನ್, ಮೆಡಿಸಿನ್ ಎಲ್ಲವನ್ನೂ ಪ್ರತ್ಯೇಕವಾಗಿ ಪರಿಶೀಲಿಸಿ ನೋಡಿದ್ದಾರೆ. ಅದರ ಆಧಾರದ ಮೇಲೆ FIR ಹಾಕಲಾಗಿದೆ. ಅವ್ಯವಹಾರ ಆಗಿರೋದು ಸತ್ಯ. ಅದಕ್ಕಾಗಿ ಸಿಎಂ ತನಿಖೆ ಮಾಡಿಸೋದಾಗಿ ಹೇಳಿದ್ರು. ನೂರಾರು ಕೋಟಿ ಹಗರಣ ಅಂತ ಆರೋಪ ಮಾಡಿದ್ದೆವು. ಅದಕ್ಕಾಗಿ ಕ್ಯಾಬಿನೆಟ್ ಸಬ್ ಕಮಿಟಿ ಮಾಡಿದ್ದೇವೆ. ಇದರಲ್ಲಿ ರಾಜಕಾರಣಿಗಳ ಹೆಸರೂ ಇದ್ರೆ ಅವರ ಮೇಲೂ FIR ಹಾಕುತ್ತೇವೆ. ಖರೀದಿ ಮಾಡಲು ಸೂಚನೆ ನೀಡಿದ್ದು, ಅದರಂತೆ ಮಾಡಿದ್ರೆ ರಾಜಕಾರಣಿಗಳ ಮೇಲೂ ಕ್ರಮ ಆಗುತ್ತದೆ" ಎಂದರು.
ಕಾಂಗ್ರೆಸ್ ಸಂವಿಧಾನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, "ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನ. ವಿಶ್ವದ ಅತ್ಯಂತ ಉತ್ತಮ ಸಂವಿಧಾನ ಅಂತ ವಿದೇಶದವರೂ ಒಪ್ಪಿದ್ದಾರೆ. ಬೇರೆ ದೇಶದವರೂ ಬಂದು ಭಾರತ ಸಂವಿಧಾನ ಅಧ್ಯಯನ ಮಾಡಿಕೊಂಡು ಹೋಗ್ತಿದ್ದಾರೆ. ಹಾಗಾಗಿ ನಾವೆಲ್ಲಾ ಇಂದಿಗೂ ಒಟ್ಟಿಗೆ ಇದ್ದೇವೆ. ಅದನ್ನೇ ಪ್ರಶ್ನೆ ಮಾಡೋದು ಸರಿಯಲ್ಲ. ಸಂವಿಧಾನ ಬದಲಾವಣೆ ಮಾಡ್ತೀವಿ ಅಂತ ಹೇಳಿದ್ದು ಬಿಜೆಪಿ ಸಂಸದರು. ನೆಹರು ಅವರ ಮೇಲೆ ಆರೋಪ ಮಾಡೋದು ಸರಿಯಲ್ಲ. ನೆಹರು ಮಾಡಿರೋ 10% ಕೆಲಸ ಮೋದಿ ಮಾಡಿಲ್ಲ" ಎಂದು ಟೀಕಿಸಿದರು.
ವಕ್ಫ್ ಬದಲು ಈಗ ಪಹಣಿಯಲ್ಲಿ ಕರ್ನಾಟಕ ಸರ್ಕಾರ ಅಂತ ನಮೂದಾಗುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಕರ್ನಾಟಕ ಸರ್ಕಾರ ಅಂತ ಇರೋದಕ್ಕೂ ಆರೋಪ ಸರಿಯಲ್ಲ. ಸರ್ಕಾರದ ಆಸ್ತಿ ಸರ್ಕಾರಕ್ಕೆ ಬಂದಿದೆ ಅಂದ್ರೆ ಸಂತೋಷಪಡಬೇಕು. ಅದಕ್ಕೂ ಆರೋಪ ಮಾಡೋದು ಸರಿಯಲ್ಲ" ಎಂದರು.
ಇದನ್ನೂ ಓದಿ: ವಿಜಯೇಂದ್ರ ವಿರುದ್ಧ ಮಾಣಿಪ್ಪಾಡಿ 150 ಕೋಟಿ ರೂ. ಆಮಿಷದ ಆರೋಪ; ಸಿಬಿಐ ತನಿಖೆಗೆ ಸಿಎಂ ಆಗ್ರಹ