ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಪರಿಶಿಷ್ಟ ಜಾತಿಗೆ ಮೀಸಲಿಟ್ಟ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ, ಮುಡಾದಲ್ಲಿ ದಲಿತ ಸಮುದಾಯದ ಭೂಮಿ ಲಪಟಾಯಿಸಿದ್ದಾರೆ. ಇದೀಗ ಜಮೀನು ನಮ್ಮದೆಂದು ಹೇಳಿ, ಅಧಿಕಾರ ದುರಪಯೋಗ ಮಾಡಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಕಾನೂನು ಹೋರಾಟ ಮಾಡಲಿ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ದೊಡ್ಡ ಪ್ರತಿಭಟನೆ ನಡೆಯುತ್ತಿವೆ. ಮೂವರು ಸಾಮಾಜಿಕ ಕಾರ್ಯಕರ್ತರು ದಾಖಲೆಸಮೇತ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ಇದೆಲ್ಲವನ್ನೂ ಅವಲೋಕನ ಮಾಡಿ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ನೋಟಿಸ್ಗೆ ಸರಿಯಾದ ಉತ್ತರ ಬಾರದ ಕಾರಣಕ್ಕೆ ಪ್ರಾಸಿಕ್ಯೂಷನ್ಗೆ ಅನುಮತಿಸಿದ್ದಾರೆ. ನಾವು ಸಿದ್ದರಾಮಯ್ಯ ಅವರನ್ನು ಅಪರಾಧಿ ಅಂತ ಕರೆಯಲ್ಲ. ಯಾಕೆಂದರೆ ಇನ್ನೂ ಆರೋಪ ಸಾಬೀತಾಗಿಲ್ಲ ಎಂದರು.
ಈ ವಿಚಾರ ಮುಂದಿಟ್ಟುಕೊಂಡು ಸಿದ್ದರಾಮಯ್ಯ ನಾನು ಹಿಂದುಳಿದ ವರ್ಗದವನಾಗಿರುವ ಕಾರಣಕ್ಕೆ ನನ್ನ ವಿರುದ್ಧ ಹುನ್ನಾರ ಮಾಡಿದ್ದಾರೆ ಎನ್ನುತ್ತಿದ್ದಾರೆ. ಇದು ಸರಿಯಲ್ಲ, ರಾಜ್ಯಪಾಲರು ಅವರ ಕೆಲಸ ಮಾಡಿ ಸುಮ್ಮನೆ ಕೂತಿದ್ದಾರೆ. ರಾಜ್ಯಪಾಲರ ಭಾವಚಿತ್ರವನ್ನು ಹಾದಿ ಬೀದಿಯಲ್ಲಿ ಸುಟ್ಟು ಹಾಕುತ್ತಿದ್ದಾರೆ. ಕಾಂಗ್ರೆಸ್ ರಾಜ್ಯಪಾಲರ ತೇಜೋವಧೆ ಮಾಡುತ್ತಿದೆ. ನೀವು ಕೇಂದ್ರದಲ್ಲಿ 60 ವರ್ಷ ಆಡಳಿತ ಮಾಡಿದ್ದೀರಿ, ಅನೇಕ ರಾಜ್ಯಪಾಲರ ನೇಮಕ ಮಾಡಿದ್ದೀರಿ. ನೀವೂ ರಾಜ್ಯಪಾಲರನ್ನು ಏಜೆಂಟ್ ಆಗಿ ಬಳಸಿಕೊಂಡಿದ್ರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು: ಹೆಚ್.ಡಿ.ಕುಮಾರಸ್ವಾಮಿ ಗರಂ - H D Kumaraswamy