ಕಲಬುರಗಿ: ಯುವ ಬ್ರಿಗೇಡ್ ಸಂಸ್ಥಾಪಕ, ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ಜಿಲ್ಲಾಡಳಿತ ಹೇರಿದ್ದ ಜಿಲ್ಲಾ ಪ್ರವೇಶ ನಿರ್ಬಂಧವನ್ನು ಕಲಬುರಗಿ ಹೈಕೋರ್ಟ್ ಪೀಠ ಇಂದು ತೆರವುಗೊಳಿಸಿತು. ಚಿತ್ತಾಪುರ ಪಟ್ಟಣದಲ್ಲಿ ಹಮ್ಮಿಕೊಂಡ 'ನಮೋ ಭಾರತ್' ಕಾರ್ಯಕ್ರಮಕ್ಕೂ ಸೂಕ್ತ ಭದ್ರತೆ ಒದಗಿಸುವಂತೆ ಪೀಠ ಸೂಚಿಸಿದೆ.
ಇಂದು ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಪಟ್ಟಣದ ಬಾಪುರಾವ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನಮೋ ಭಾರತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ರಾತ್ರೋರಾತ್ರಿ ಜಿಲ್ಲಾಡಳಿತ ರದ್ದು ಮಾಡಿ ಸೂಲಿಬೆಲೆ ಪ್ರವೇಶಕ್ಕೆ ನಿರ್ಬಂಧ ಹೇರಿತ್ತು.
ಪ್ರಚೋದನಕಾರಿ ಭಾಷಣದಿಂದ ಶಾಂತಿಗೆ ಧಕ್ಕೆ ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪ್ರವೇಶ ನಿರ್ಬಂಧಿಸಿ ಉಪ ವಿಭಾಗಾಧಿಕಾರಿ ರೂಪೇಂದ್ರ ಕೌರ್ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಕಲಬುರಗಿ ಜಿಲ್ಲೆಗೆ ಪ್ರವೇಶ ಮಾಡುತ್ತಿದ್ದ ಸೂಲಿಬೆಲೆಯನ್ನು ಮಾರ್ಗಮಧ್ಯೆ ತಡೆದ ಪೊಲೀಸರು ಅವರನ್ನು ವಾಪಸ್ ಕಳುಹಿಸಿದ್ದರು. ಬೀದರ್ ಜಿಲ್ಲೆಯ ಭಾಲ್ಕಿಯಿಂದ ಕಲಬುರಗಿ ಜಿಲ್ಲೆಗೆ ಪ್ರವೇಶ ಮಾಡುತ್ತಿದ್ದ ಅವರ ಕಾರನ್ನು ಕಮಲಾಪುರದ ಕಿಣ್ಣಿಸಡಕ್ ಬಳಿ ಪೊಲೀಸರು ತಡೆದಿದ್ದರು. ಈ ವೇಳೆ ಸುಮಾರು 2 ಗಂಟೆಗಳ ಕಾಲ ಸೂಲಿಬೆಲೆ ಮತ್ತು ಪೊಲೀಸರ ನಡುವೆ ವಾಕ್ಸಮರ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸೂಲಿಬೆಲೆ ಹೈಕೋರ್ಟ್ ಪೀಠದ ಮೆಟ್ಟಿಲೇರಿದ್ದರು.
ಇದೀಗ ಸೂಲಿಬೆಲೆ ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಬಳಗಕ್ಕೆ ಮನವಿ ಮಾಡಿದ್ದು, ನಾನು ಬರುತ್ತಿದ್ದೇನೆ, ಎರಡು ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಭಾರತಾ ಮಾತಾಕೀ ಜೈ ಎನ್ನುವ ಮನಸ್ಸಿದ್ದವರು ಬಂದು ಧ್ವನಿ ಸೇರಿಸಿ ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ: ಪಕ್ಷೇತರನಾಗಿ ಕಣಕ್ಕಳಿಯಲು ನಿರ್ಧರಿಸಿದ ಅರುಣ್ ಕುಮಾರ್ ಪುತ್ತಿಲ